ವಿಜಯೇಂದ್ರ ಬಿಎಸ್‍ವೈರ ಪುತ್ರ ಹೊರತು ಸರ್ಕಾರದ ಅಧಿಪತಿಯಾಗಲು ಸಾಧ್ಯವಿಲ್ಲ: ಸಚಿವ ಮಾಧುಸ್ವಾಮಿ

Public TV
2 Min Read
Madhu Swamy Vijayendra

ಹಾಸನ: ಪ್ರಪಂಚದಲ್ಲೇ ಅತೀ ಹೆಚ್ಚು ಅಪಾಯ ಇರುವ ವ್ಯಕ್ತಿ ಭಾರತಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಹೆಚ್ಚಿನ ಸೂಕ್ತ ಭದ್ರತೆಯನ್ನು ಒದಗಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಪ್ರಪಂಚದಲ್ಲಿ ಹೆಚ್ಚು ಲೈಫ್ ರಿಸ್ಕ್ ಇರುವ ವ್ಯಕ್ತಿ ಭಾರತಕ್ಕೆ ಬರುತ್ತಿದ್ದಾರೆ. ಅವರಿಗೆ ಏನೆಲ್ಲ ಭದ್ರತೆ ನೀಡಬೇಕು ಅದನ್ನು ನೀಡಿದ್ದಾರೆ. ಅಂತಾರಾಷ್ಟ್ರೀಯವಾಗಿ ಅಮೆರಿಕ ಸಖ್ಯ ಬಹಳ ಮುಖ್ಯವಾಗಿದೆ. ಪಾಕಿಸ್ತಾನ, ಚೀನಾ ಜೊತೆ ನಿರಂತರವಾಗಿ ಹೋರಾಟ ಮಾಡುವಾಗ ಸಹಾಯ ಇಲ್ಲದಿದ್ದರೆ ಬಹುಶಃ ನಾವು ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಫೇಲ್ ಆಗುತ್ತೇವೆ. ವಿಶ್ವದ ಪ್ರಮುಖ ರಾಷ್ಟ್ರಗಳ ಕಾನ್ಫರೆನ್ಸ್ ಗೆ ತೆಗೆದುಕೊಂಡು ಅರ್ಟಿಕಲ್ 370 ರಂತಹ ಕಾನೂನು ತೆಗೆಯಲು ಸಮರ್ಥರಾಗಿದ್ದೇವೆ. ಇಲ್ಲದಿದ್ದರೆ ಅಂತಾರಾಷ್ಟ್ರೀಯವಾಗಿ ಮುಖಭಂಗ ಆಗುತ್ತಿತ್ತು. ಹೀಗಾಗಿ ಬೇರೆ ರಾಷ್ಟ್ರಗಳ ಜೊತೆ ಒಡನಾಟ ಮುಖ್ಯ. ಅವರು ಬರುವುದರಿಂದ ವ್ಯಾಪಾರ ವಿಷಯದಲ್ಲಿ ಸಹಾಯವಾಗಬಹುದು. ಅವರ ಭೇಟಿ ಶೇ.99 ಭಾಗ ರೈತ ವಿರೋಧಿಯಲ್ಲ. ಡೈರಿ ಉತ್ಪನ್ನ ಆಮದಿನ ಒಪ್ಪಂದದ ಬಗ್ಗೆ ವಿರೋಧವಿದ್ದು, ಅದನ್ನು ಬದಿಗಿಡಿ ಎಂದು ಪ್ರಧಾನಿ ಗಮನಕ್ಕೆ ತಂದಿದ್ದೇವೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಟ್ವೀಟ್‍ಗೆ ಸ್ಪಷ್ಟನೆ ನೀಡಿದರು.

Madhu Swamy a

ವಿಜಯೇಂದ್ರ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್‍ಗೆ ರಾಜ್ಯ ನಾಯಕರು ದೂರು ನೀಡಿದ್ದಾರೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಆಡಳಿತ ಪಕ್ಷ ಎಂದಾಗ ಇಂತಹ ಆರೋಪಗಳು ಇರುತ್ತದೆ. ಆದರೆ ಬಿಜೆಪಿಯಲ್ಲಿ ಯಾರೂ ಹೊರ ಹೋಗುವ ಪರಿಸ್ಥಿತಿ ಇಲ್ಲ. ಪರ-ವಿರೋಧ ಇದ್ದಾಗ ನಮ್ಮ ಭಾವನೆಗಳನ್ನು ಮುಖ್ಯಮಂತ್ರಿಗಳು, ಗೃಹ ಸಚಿವರು, ಪಕ್ಷದ ವರಿಷ್ಠರ ಬಳಿ ಹೇಳಿಕೊಳ್ಳುತ್ತೇವೆ. ಅಭಿಪ್ರಾಯ ಬೇರೆ ಬೇರೆ ಇದ್ದಾಗ ಹೇಳಿಕೊಳ್ಳುವುದು ತಪ್ಪಿಲ್ಲ. ಆದರೆ ಇದು ನಮ್ಮಲ್ಲಿ ಒಡಕನ್ನು ಸೃಷ್ಟಿ ಮಾಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯೇಂದ್ರ ಸೂಪರ್ ಸಿಎಂ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರವರ ಭಾವಕ್ಕೆ, ಅವರವರ ಭಕ್ತಿಗೆ ಆ ತೆರನಾಗಿ ಹೇಳುತ್ತಾರೆ. ಆದರೆ ಸಂವಿಧಾನದಲ್ಲಿ ಯಾವ ಸೂಪರ್ ಸಿಎಂ ಕೂಡ ಇಲ್ಲ. ಯಡಿಯೂರಪ್ಪ ಒಬ್ಬರೇ ಮುಖ್ಯಮಂತ್ರಿ ಇರೋದು. ವಿಜಯೇಂದ್ರ ಯಡಿಯೂರಪ್ಪ ಅವರ ಮಗನೇ ಹೊರತು ಸರ್ಕಾರದ ಯಾವ ವ್ಯವಹಾರಕ್ಕೂ ಆತ ಅಧಿಪತಿಯಾಗಲು ಸಾಧ್ಯವಿಲ್ಲ ಎಂದರು.

CT Ravi 2

ಇದೇ ವೇಳೆ ಅಮೂಲ್ಯ ದೇಶದ್ರೋಹ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಆಕೆಯನ್ನು ತಯಾರು ಮಾಡಿ ಕಳುಹಿಸಿದ್ದಾರೆ. ಆಕೆ ಆಕಸ್ಮಿಕವಾಗಿ ಬಂದು ಆ ರೀತಿ ವರ್ತಿಸಿಲ್ಲ. ಯಾರು ಮಾಡಿದ್ದು, ಯಾಕೆ ಮಾಡಿದ್ದು ಎಂಬುದು ತನಿಖೆ ಆದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಅಮೂಲ್ಯ ಒಂದು ವರ್ಷದಿಂದ ಎಲ್ಲ ಕಡೆ ಸಮಾಜದಲ್ಲಿ ಶಾಂತಿ ಕೆಡಿಸುವ ರೀತಿ ವರ್ತಿಸುತ್ತಿದ್ದಾರೆ. ಐಪಿಸಿ 124 ನಲ್ಲಿ ಸ್ಪಷ್ಟಪಡಿವಾಗಿ ಹೇಳಿರುವಂತೆ ಆಕೆಯ ಮೇಲೆ ದೇಶದ್ರೋಹ ಪ್ರಕರಣ ಹಾಕಲಾಗಿದೆ ಎಂದರು. ಉಳಿದಂತೆ ಕ್ಯಾಸಿನೊ ಕುರಿತ ಸಚಿವ ಸಿಟಿ ರವಿ ಅವರ ಹೇಳಿಕೆ ಆಕಸ್ಮಿಕ ಅಷ್ಟೇ. ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಇಲ್ಲಿಂದ ದುಡ್ಡು ತೆಗೆದುಕೊಂಡು ಹೋಗಿ ಅಲ್ಲಿ ಹಾಳು ಮಾಡುತ್ತಿದ್ದಾರೆ. ಅದರ ಬದಲು ಇಲ್ಲೇ ಏಕೆ ಮಾಡಬಾರದು ಅಂದಿದ್ದಾರೆ. ಈ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ನಾವು ಆ ತೀರ್ಮಾನಕ್ಕೆ ಬಂದು ದ್ರೋಹ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *