ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 24ರಂದು 2 ದಿನಗಳ ಕಾಲ ಭಾರತ ಭೇಟಿಗೆ ಆಗಮಿಸಲಿದ್ದಾರೆ. ಟ್ರಂಪ್ ಜೊತೆಗೆ ಪತ್ನಿ ಮೆಲಾನಿಯಾ ಆಗಮಿಸಲಿದ್ದಾರೆ ಎನ್ನಲಾಗಿತ್ತು. ಈಗ ಟ್ರಂಪ್ ದಂಪತಿ ಜೊತೆಯಲ್ಲಿ ಮಗಳು ಇವಾಂಕಾ ಟ್ರಂಪ್ ಹಾಗೂ ಅಳಿಯ ಜೆರಾಲ್ಡ್ ಕುಶ್ನರ್ ಕೂಡ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಡೊನಾಲ್ಡ್ ಟ್ರಂಪ್ ಭೇಟಿ ಹಿನ್ನೆಲೆ ಗುಜರಾತ್‍ನ ರಾಜಧಾನಿ ಅಹಮದಾಬಾದ್‍ನಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್‍ಗೆ ಶುಭಾಶಯ ಕೋರಿ ಬೃಹತ್ ಪೋಸ್ಟರ್‌ಗಳು ರಸ್ತೆಯುದ್ದಕ್ಕೂ ರಾರಾಜಿಸುತ್ತಿದೆ. ಟ್ರಂಪ್ ಸಾಗುವ ರಸ್ತೆಯುದ್ದಕ್ಕೂ ಅಲಂಕಾರ ಮಾಡಲಾಗುತ್ತಿದೆ.
ಭಾರತ ಭೇಟಿಯ ಬಗ್ಗೆ ಉತ್ಸುಕತೆ ತೋರಿರುವ ಡೊನಾಲ್ಡ್ ಟ್ರಂಪ್, ಈ ಭೇಟಿ ಅತ್ಯಂತ ರೋಮಾಂಚನಕಾರಿಯಾಗಿದೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ತುಂಬಾ ಇಷ್ಟಪಡುತ್ತೇನೆ. ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯಲಿರುವ ವಿಶ್ವದ ಅತೀ ದೊಡ್ಡ ಕ್ರೀಡಾಂಗಣಕ್ಕೆ ಸಾಗುವ ರಸ್ತೆಯುದ್ದಕ್ಕೂ ಏಳು ಮಿಲಿಯನ್ ಜನರು ಸೇರಲಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ ಎಂದು ಟ್ರಂಪ್ ಹೇಳಿದ್ದರು. ಅಲ್ಲದೇ ಭಾರತದ ಭೇಟಿ ನಿಜಕ್ಕೂ ರೋಮಾಂಚನಕಾರಿ ಕ್ಷಣ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.