ಕಲ್ಮುರುಡೇಶ್ವರ ಮಠದಲ್ಲಿ 800ಕ್ಕೂ ಹೆಚ್ಚು ಮರಗಳ ಬಿಲ್ವಪತ್ರೆ ವನ

Public TV
2 Min Read
ckm bilva vana

ಚಿಕ್ಕಮಗಳೂರು: ಬಿಲ್ವಪತ್ರೆ ಅಂದರೆ ಭೀಮಾಶಂಕರನಿಗೆ ಬಲು ಪ್ರೀತಿ. ಈಗ ಬಿಲ್ವ ಪತ್ರೆ ಮರಗಳು ಮಾಯ ಆಗ್ತಿವೆ. ಆದರೆ ಚಿಕ್ಕಮಗಳೂರಿನ ಸಖರಾಯಪಟ್ಟಣದ ಕಲ್ಮುರುಡೇಶ್ವರ ಮಠದ ಆವರಣದಲ್ಲಿ 800ಕ್ಕೂ ಅಧಿಕ ಬಿಲ್ವಪತ್ರೆ ಮರಗಳಿದ್ದು, ಕಾಡಿನಂತೆ ಬೆಳೆದು ನಿಂತಿವೆ.

ckm bilva vana 2

ಬಿಲ್ವಪತ್ರೆ ಅಂದರೆ ಶಿವನ ಭಕ್ತರಿಗೆ ಎಲ್ಲಿಲ್ಲದ ಗೌರವ. ಬಿಲ್ವ ಪತ್ರೆಯಲ್ಲೇ ಶಿವನನ್ನ ಪೂಜಿಸಬೇಕು ಅನ್ನೋದು ಶಿವಭಕ್ತರ ಕನಸು. ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಸಸ್ಯ ರಾಶಿಯಲ್ಲೇ ಅಪರೂಪ ಹಾಗೂ ಆಧ್ಯಾತ್ಮಿಕವಾಗಿ ಪರಮ ಶ್ರೇಷ್ಠವಾಗಿರೋ ಬಿಲ್ವ ಪತ್ರೆಗಾಗಿ ಕಾಡು-ಮೇಡು ಅಲೆಯೋ ಭಕ್ತರೂ ಇದ್ದಾರೆ. ಆದರೆ ಕಾಫಿನಾಡ ಸಖರಾಯಪಟ್ಟಣದ ಕಲ್ಮುರುಡೇಶ್ವರ ಮಠದ ಆವರಣದಲ್ಲಿ 800ಕ್ಕೂ ಅಧಿಕ ಬಿಲ್ವಪತ್ರೆ ಮರಗಳಿದ್ದು, ಯಾರೊಬ್ಬರು ಒಂದೇ ಒಂದು ಸಸಿಯನ್ನ ನೆಡದಿದ್ದರೂ ತನ್ನಷ್ಟಕ್ಕೆ ತಾನೆ ಬೆಳೆದು ನಿಂತ ಬಿಲ್ವಪತ್ರೆಯ ಮರಗಳು ಈ ಜಾಗದ ವಿಶೇಷತೆಯಾಗಿದೆ.

ckm bilva vana 3

ಬಿಲ್ವಪತ್ರೆಯಲ್ಲಿ ಶಿವಾರಾಧನೆ ಮಾಡಿದರೆ ಶಿವ ಮೆಚ್ಚಿ ಭಕ್ತರ ಬೇಡಿಕೆ ಈಡೇರಿಸ್ತಾನೆ ಅನ್ನೋದು ಭಕ್ತರ ನಂಬಿಕೆ. ಈ ಬಿಲ್ವಪತ್ರೆ ಎಲ್ಲೆಂದರಲ್ಲಿ ಸಿಗದಿರೋದೆ ಶಿವಭಕ್ತರ ಕೊರಗು. ಆದರೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟದ ಕಲ್ಮುರುಡೇಶ್ವರ ಸ್ವಾಮಿ ಮಠದ ಆವರಣದಲ್ಲಿ 800ಕ್ಕೂ ಅಧಿಕ ಬಿಲ್ವಪತ್ರೆ ಮರಗಳಿವೆ. ಈ ಬಿಲ್ವಪತ್ರೆ ವನದ ಸೊಬಗು ಸವಿಯಲು ರಾಜ್ಯದ ಮೂಲೆ, ಮೂಲೆಗಳಿಂದ ಪ್ರತಿನಿತ್ಯ ನೂರಾರು ಭಕ್ತರು ಆಗಮಿಸ್ತಾರೆ. ಮಠಕ್ಕಾಗಮಿಸೋ ಭಕ್ತರು ಬಿಲ್ವಪತ್ರೆ ಎಲೆ ಕೊಯ್ದು, ಭಕ್ತಿಯಿಂದ ಇಲ್ಲಿನ ಕಲ್ಮುರುಡೇಶ್ವರನಿಗೆ ಮುಡಿಸೋದು ವಾಡಿಕೆ. ಹೀಗೆ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುತ್ತವೆ ಅನ್ನೋದು ಭಕ್ತರ ನಂಬಿಕೆ.

ckm bilva vana 4

ಅಪರೂಪದಲ್ಲೂ ಅತ್ಯಂತ ವಿರಳವಾಗಿರೋ ಬಿಲ್ವಪತ್ರೆಯ ಒಂದೂ ಮರ ಕಂಡರೇನೆ ಶಿವಭಕ್ತರು ನಾನೇ ಧನ್ಯ ಅಂತಾರೆ. ಅಂತಹದರಲ್ಲಿ ನೂರಾರು ಮರಗಳನ್ನ ಇಲ್ಲಿಗೆ ತಂದು ನೆಟ್ಟೋರ್ಯಾರು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಆದರೆ ಈ ಪ್ರಶ್ನೆಗೆ ಸ್ಥಳೀಯರು ಹತ್ತಾರು ಪುರಾಣದ ಕಥೆ ಹೇಳುತ್ತಾರೆ. ಹಿಂದೆ ಮರುಳಸಿದ್ದೇಶ್ವರನೆಂಬ ಸನ್ಯಾಸಿಯೊಬ್ಬ ಇಲ್ಲಿ ತಪಸ್ಸು ಮಾಡುತ್ತಿದ್ದರು. ಆ ವೇಳೆ ಅವರು ರುದ್ರಾಕ್ಷಿಯನ್ನು ಮಠದ ಸುತ್ತಲೂ ಚೆಲ್ಲಿದ್ದರಿಂದ ಈ ಮರಗಳು ಬೆಳೆದಿವೆ. ಮರಗಳನ್ನು ಯಾರು ಬೆಳೆಸಿಲ್ಲ. ಶಿವನ ಶಕ್ತಿಯಿಂದ ನೈಸರ್ಗಿಕವಾಗಿ ಬೆಳೆದು ನಿಂತಿವೆ ಅಂತ ಹಿರಿಯರು, ಭಕ್ತರು ಹೇಳುತ್ತಾರೆ.

ckm bilva vana 2 1

ಅದೇನೆ ಇರಲಿ ವನದಲ್ಲಿ ಬಿಲ್ವಪತ್ರೆ ಹೊರತುಪಡಿಸಿ ಬೇರ್ಯಾವ ಮರಗಿಡಗಳಿಲ್ಲ. ಸುಮಾರು 2 ಎಕ್ರೆ ಪ್ರದೇಶದಲ್ಲಿ ಬೆಳೆದಿರೋ ಈ ಮರಗಳು ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ. ಇನ್ನಾದರೂ ಈ ಅಪರೂಪದ ಸಸ್ಯ ಸಂಪತ್ತಿನತ್ತ ಸರ್ಕಾರ ಗಮನ ಹರಿಸಬೇಕೆಂಬುದು ಸ್ಥಳಿಯರ ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *