ನಾನು ಈಗ ‘ಅತ್ಯುತ್ತಮ ಕಂಪನಿಯ ಜೊತೆಯಲ್ಲಿದ್ದೇನೆ’ ಎಂದ ರಾಹುಲ್

Public TV
2 Min Read
kl rahul 5

ವೆಲ್ಲಿಂಗ್ಟನ್: ಟೀಂ ಇಂಡಿಯಾ ಕ್ರಿಕೆಟರ್ ಕೆ.ಎಲ್.ರಾಹುಲ್ ಉತ್ತಮ ಬ್ಯಾಟಿಂಗ್, ಕೀಪಿಂಗ್ ಮೂಲಕ ತಮ್ಮ ಖ್ಯಾತಿಯನ್ನು ಬೆಳೆಸಿಕೊಂಡಿದ್ದಾರೆ. 2019ರ ಆರಂಭಿಕ ಹಂತದಲ್ಲಿ ಭಾರತ ತಂಡದಲ್ಲಿ ಸ್ಥಾನಕ್ಕಾಗಿ ಹೋರಾಡಿದ್ದ ರಾಹುಲ್ ಈಗ ಸೀಮಿತ ಓವರ್‌ಗಳ ಭಾರತ ತಂಡದಲ್ಲಿ ಅನಿವಾರ್ಯ ಸದಸ್ಯರಾಗಿದ್ದಾರೆ. ಓಪನರ್, ಫಿನಿಶರ್ ಮತ್ತು ವಿಕೆಟ್ ಕೀಪರ್ ಹೀಗೆ ಭಾರತೀಯ ತಂಡದಲ್ಲಿ ಅನೇಕ ಪಾತ್ರಗಳನ್ನು ವಹಿಸಿಕೊಂಡ ರಾಹುಲ್ ಅವರು ಕ್ರೀಡಾ ನಿರೂಪಕ ಮತ್ತು ಪ್ರೆಸೆಂಟರ್ ಜತಿನ್ ಸಪ್ರು ಅವರ ಮಗಳೊಂದಿಗೆ ಕಾಣಿಸಿಕೊಂಡು ಮೈದಾನದಿಂದ ಹೊಸ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ.

ಇದಕ್ಕೂ ಮೊದಲು, ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಟಿಮ್ ಪೈನ್ ಅವರ ಮಕ್ಕಳೊಂದಿಗೆ ಗುರುತಿಸಿಕೊಂಡಿದ್ದ ರಿಷಬ್ ಪಂತ್ ಅವರು ‘ಬೇಬಿಸಿಟ್ಟರ್’ ಎಂದು ಖ್ಯಾತಿ ಗಳಿಸಿದ್ದರು. ಈಗ ಭಾರತದ ಏಕದಿನ ಮತ್ತು ಟಿ20 ತಂಡಗಳಲ್ಲಿ ವಿಕೆಟ್ ಕೀಪರ್ ಆಗಿ ಪಂತ್ ಸ್ಥಾನವನ್ನು ರಾಹುಲ್ ವಹಿಸಿಕೊಂಡಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅವರಂತೆ ಬೇಬಿ ಸಿಟ್ಟರ್ ಆಗಿ ರಾಹುಲ್ ಕಾಣಿಸಿಕೊಂಡಿದ್ದಾರೆ.

ಕೆ.ಎಲ್.ರಾಹುಲ್ ಅವರು ಸಪ್ರು ಅವರ ಮಗಳ ಜೊತೆ ಇರುವ ಫೋಟೋವನ್ನು ಟ್ವಿಟ್ ಮಾಡಿ, ‘ಅತ್ಯುತ್ತಮ ಕಂಪನಿಯಲ್ಲಿ’ ಎಂದು ಬರೆದುಕೊಂಡಿದ್ದಾರೆ.

ಸಪ್ರು ಕೂಡ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಮತ್ತೊಂದು ಪಾತ್ರ’ ಎಂದು ಬರೆದುಕೊಂಡಿದ್ದಾರೆ. ಕೆ.ಎಲ್.ರಾಹುಲ್ ಕಳೆದ ಕೆಲವು ಪಂದ್ಯಗಳಲ್ಲಿ ಓವರ್ ಬ್ಯಾಟ್ಸ್‌ಮನ್, ಕೀಪಿಂಗ್, ತಂಡದ ನಾಯಕ, 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಸೇರಿದಂತೆ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹೀಗಾಗಿ ಮತ್ತೊಂದು ಪಾತ್ರವನ್ನು ರಾಹುಲ್ ನಿರ್ವಹಿಸುತ್ತಿದ್ದಾರೆ ಎಂದು ಸಪ್ರು ಹೇಳಿದ್ದಾರೆ.

ಕಿವೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಲ್ಲಿ ಫಾರ್ಮ್ ಮತ್ತು ಸಾಕಷ್ಟು ಭರವಸೆಯನ್ನು ತೋರಿಸಿದ್ದರೂ ರಾಹುಲ್ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿಲ್ಲ. 27 ವರ್ಷದ ರಾಹುಲ್ 5 ಪಂದ್ಯಗಳ ಟಿ20 ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಅಗ್ರ ಸ್ಕೋರಿಂಗ್ ಬ್ಯಾಟ್ಸ್‍ಮನ್‍ಗಳಲ್ಲಿ ಒಬ್ಬರಾಗಿದ್ದರು.

ಟೆಸ್ಟ್ ಸರಣಿಗೆ ಸ್ಥಾನ ಪಡೆಯದಿದ್ದರೂ ರಾಹುಲ್ ಅವರನ್ನು ನ್ಯೂಜಿಲೆಂಡ್‍ನಲ್ಲೇ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಅವರು ಸ್ಥಾನ ಪಡೆಯುತ್ತಾರೆ ಎಂಬ ವಿಶ್ವಾಸವನ್ನು ಅನೇಕರು ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಅವರು ಕಿವೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡದಿದ್ದರೆ ಮಾರ್ಚ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ನೀಲಿ ಜರ್ಸಿ ತೊಟ್ಟು ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *