ಬೆಂಗಳೂರು: ಸದನದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಹಾವು ಮುಂಗುಸಿಯಂತೆ ಆಡಿದ್ದರು. ಸರಿಯಾಗಿ ಚರ್ಚೆಗೆ ಅವಕಾಶ ಸಿಗುತ್ತಿಲ್ಲ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಟ್ಟುಮಾಡಿಕೊಂಡು ಸಭಾತ್ಯಾಗವನ್ನೂ ಮಾಡಿದ್ದರು.
ಆದರೆ ಸ್ಪೀಕರ್ ಕಚೇರಿ ಸಂಧಾನದ ನಂತರ ಸಭೆಯ ನಿರ್ಣಯಕ್ಕೆ ಬೆಲೆ ಕೊಟ್ಟು ಅಧಿವೇಶನದಲ್ಲಿ ಭಾಗವಹಿಸಿದ ವಿಪಕ್ಷ ನಾಯಕನಿಗೆ ಸಿಎಂ ಸದನದಲ್ಲೇ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಬಾದಾಮಿ ಕ್ಷೇತ್ರದ 3 ಫೈಲ್‍ಗಳಿಗೆ ಸದನದಲ್ಲೇ ಕುಳಿತು ಮುಖ್ಯಮಂತ್ರಿ ಯಡಿಯೂರಪ್ಪ ಸಹಿ ಹಾಕಿದರು. ಕೃಷಿ, ನೀರಾವರಿ ಹಾಗೂ ಪ್ರವಾಸೋದ್ಯಮದ ಮೂರು ಫೈಲ್‍ಗಳಿಗೆ ಸದನದಲ್ಲಿಯೇ ಕುಳಿತು ಸಹಿ ಮಾಡಿದ್ದಾರೆ.
ಸ್ಪೀಕರ್ ಕಚೇರಿ ಸಭೆ ಮುಗಿಸಿ ಬಂದು ಸದನ ಆರಂಭವಾದ ಕೆಲವೇ ಹೊತ್ತಿನಲ್ಲಿ ಸದನದಲ್ಲೇ ಸಿಎಂ ಟೇಬಲ್‍ಗೆ ಬಾದಾಮಿ ಕ್ಷೇತ್ರದ ಮೂರು ಪ್ರಮುಖ ಫೈಲ್ ಗಳು ಬಂದವು. ಅಂದಾಜು 600 ಕೋಟಿ ವೆಚ್ಚದ ಕಾಮಗಾರಿಗೆ ಒಪ್ಪಿಗೆ ನೀಡಿ ಹಾಕಲಾದ ಸಹಿ ಎನ್ನಲಾಗುತ್ತಿದೆ. ಕುಳಿತಲ್ಲೇ ಸಹಿ ಹಾಕಿ ತಮ್ಮ ಕಾರ್ಯದರ್ಶಿ ಸೆಲ್ವಾ ಕುಮಾರ್‍ಗೆ ಸಿಎಂ ಫೈಲ್ ರವಾನಿಸಿದ್ದರು. ರಾಜಾಹುಲಿಗೆ ಹುಲಿಯನ ಮೇಲೆ ಇನ್ನಿಲ್ಲದ ಕಾಳಜಿ ಕುಳಿತಲ್ಲೇ ಸಹಿ ಹಾಕಿ ತೋರಿಸಿದ್ದಾರೆ.