ಬೆಂಗಳೂರು: ಹಿರಿಯ ನಟಿ ಕಿಶೋರಿ ಬಲ್ಲಾಳ್ ಇಂದು ನಿಧನರಾಗಿದ್ದಾರೆ.
ಸುಮಾರು 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿ ಕಿಶೋರಿ ಬಲ್ಲಾಳ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕಿಶೋರಿ ಬಲ್ಲಾಳರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಜಯನಗರದ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಷಯ ತಿಳಿದು ಕುಟುಂಬಸ್ಥರು ಸೇವಾಕ್ಷೇತ್ರ ಆಸ್ಪತ್ರೆಯತ್ತ ಆಗಮಿಸುತ್ತಿದ್ದಾರೆ. ಶಾರೂಖ್ ಖಾನ್ ನಟನೆಯ ‘ಸ್ವದೇಶ್’ ಸಿನಿಮಾದಲ್ಲಿ ಕಿಶೋರಿ ಬಲ್ಲಾಳ್ ನಟಿಸಿದ್ದರು. ಕೆಲ ವರ್ಷಗಳಿಂದ ಬಣ್ಣದ ಲೋಕದಿಂದ ದೂರ ಸರಿದು ವಿಶ್ರಾಂತಿಯಲ್ಲಿದ್ದರು. ಅಜ್ಜಿ, ತಾಯಿ ಪಾತ್ರದಲ್ಲಿ ಕಿಶೋರಿ ಬಲ್ಲಾಳ್ ನಟಿಸುತ್ತಿದ್ದು, ಮನೆ ಮಾತಾಗಿದ್ದರು. ಕನ್ನಡದ ಬಹುತೇಕ ಸ್ಟಾರ್ ನಟರೊಂದಿಗೆ ಕಿಶೋರಿ ಬಲ್ಲಾಳ್ ತೆರೆಹಂಚಿಕೊಂಡಿದ್ದಾರೆ.