ಬೆಂಗಳೂರು: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಗುಜರಾತಿನ ಅಹಮದಾಬಾದಿನಲ್ಲಿರುವ ಬೀದಿ ಬದಿಯ ವ್ಯಾಪಾರಿಗಳ ತಳ್ಳು ಗಾಡಿಯನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಲಾಗುತ್ತಿದೆ ಎನ್ನುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಫೇಸ್‍ಬುಕ್ ಮತ್ತು ವಾಟ್ಸಪ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಆದರೆ ಇದೊಂದು ಸುಳ್ಳು ವಿಡಿಯೋ ಆಗಿದ್ದು ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಮಹಾನಗರ ಪಾಲಿಕೆ ರಸ್ತೆ ತೆರವು ಕಾರ್ಯಾಚರಣೆಯ ದೃಶ್ಯಕ್ಕೆ ಸುಳ್ಳು ಮಾಹಿತಿ ನೀಡಿ ವಿಡಿಯೋ ಹರಿ ಬಿಡಲಾಗುತ್ತಿದೆ.
ಈ ವಿಡಿಯೋವನ್ನು ಒಡಿಶಾದಲ್ಲಿರುವ ವಾಹಿನಿಯೊಂದು 2020ರ ಜನವರಿ 24 ರಂದು ಅಪ್ಲೋಡ್ ಮಾಡಿದೆ. ವಿಶೇಷ ಏನೆಂದರೆ ಉತ್ತರ ಪ್ರದೇಶದಲ್ಲಿ ನಡೆದ ಸಿಎಎ ವಿರೋಧಿ ಹೋರಾಟದ ಸಂದರ್ಭದಲ್ಲೂ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಈಗ ವಿಡಿಯೋ ಯೂಟ್ಯೂಬ್ ನಲ್ಲಿ ರೋಸ್ ನ್ಯೂಸ್ ಟಿವಿ ಹೆಸರಿನಲ್ಲಿರುವ ಯೂಟ್ಯೂಬ್ ಖಾತೆಯಲ್ಲಿ ಅಪ್ಲೋಡ್ ಆಗಿದೆ. ಈ ವಿಡಿಯೋಗೆ ಟ್ರಂಪ್ ಅಹಮದಾಬಾದಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಬೀದಿ ವ್ಯಾಪಾರಿಗಳನ್ನು ಬಲವಂತವಾಗಿ ತೆರವುಗೊಳಿಸಲಾಗುತ್ತಿದೆ ಎಂದು ಶೀರ್ಷಿಕೆ ನೀಡಲಾಗಿದೆ.
ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ ಕೈಗೊಳ್ಳುತ್ತಾರೆ ಎಂಬ ಸುದ್ದಿ ಬರುತ್ತಿದ್ದರೂ ಫೆ.11ರಂದು ಶ್ವೇತಭವನ ಟ್ವೀಟ್ ಮಾಡುವ ಮೂಲಕ ಅಧಿಕೃತವಾಗಿ ಖಚಿತಗೊಂಡಿತ್ತು. ಶ್ವೇತಭವನ ಪ್ರಕಟ ಮಾಡುವ ಮೊದಲೇ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.