ಯಾದಗಿರಿ ಮೆಡಿಕಲ್ ಕಾಲೇಜು ರಸ್ತೆ ನಿರ್ಮಾಣದಲ್ಲಿ ಪ್ರಭಾವಿಗಳ ಹಿಂಬದಿಯಾಟ – ಭೂಮಿ ಕೊಟ್ಟವರ ಕಣ್ಣೀರು

Public TV
2 Min Read
YGR MEDICAL COLLEGE

ಯಾದಗಿರಿ: 2018ರಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವ ದೃಷ್ಟಿಕೋನ ಇಟ್ಟುಕೊಂಡು ನಗರದ ಹೊರವಲಯದ ಮುದ್ನಾಳ್ ತಾಂಡಾದ ಬಳಿ 300 ಹಾಸಿಗೆಯ ಸಾಮರ್ಥ್ಯದ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಿಸಲಾಗಿದೆ. ನಿರೀಕ್ಷೆಯಂತೆ ಕಳೆದ ವರ್ಷ ಕೇಂದ್ರ ಸರ್ಕಾರ ಮೆಡಿಕಲ್ ಕಾಲೇಜು ಸಹ ಮಂಜೂರು ಮಾಡಿದೆ. ವಿಪರ್ಯಾಸ ಎಂದರೆ ಕಟ್ಟಡ ಕಾಮಗಾರಿ ಪೂರ್ಣವಾಗಿದ್ದರೂ ರಸ್ತೆಗೆ ಜಾಗ ಕೊಟ್ಟವರಿಗೆ ಸಂಕಷ್ಟ ಮಾತ್ರ ತಪ್ಪಿಲ್ಲ.

ಆಸ್ಪತ್ರೆಗೆ 2017ರಲ್ಲಿ ನಿಗದಿಯಾಗಿದ್ದ ಜಾಗ ಬಿಟ್ಟು, ಈಗ ಬೆರೆಡೆ ಮಾರ್ಗ ಬದಲಿಸಿದ ಜಿಲ್ಲಾಡಳಿತ ಜಮೀನು ಮಾಲೀಕರ ಅನುಮತಿ ಇಲ್ಲದೆ, ರಸ್ತೆ ನಿರ್ಮಾಣ ಮಾಡುತ್ತಿದೆ. ಚಿತ್ತಾಪುರ ಮುಖ್ಯ ರಸ್ತೆಯಿಂದ ಸುಮಾರು 7 ಎಕ್ರೆ ಉದ್ದ ಮತ್ತು 100 ಅಡಿ ಅಗಲವಾದ ರಸ್ತೆ ನಿರ್ಮಿಸಲು 2017ರಲ್ಲಿ ಆಸ್ಪತ್ರೆ ಬ್ಲೂ ಪ್ರಿಂಟ್ ತಯಾರಿಸಲಾಗಿತ್ತು. ಅದರಂತೆ ಸುಮಾರು 21 ರೈತರ ಜಮೀನಲ್ಲಿ ಈ ರಸ್ತೆ ಹಾದು ಹೋಗುತ್ತದೆ. ಇದಕ್ಕೆ ಈಗಾಗಲೇ ರೈತರು ಸಹ ಸಮ್ಮತಿ ನೀಡಿ ಕೆಲವೊಬ್ಬರು ಪರಿಹಾರ ಸಹ ಪಡೆದಿದ್ದರು. ಇನ್ನೂ ಕೆಲವರು ಭೂಮಿ ಕೊಡುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂತಹ ಹೊತ್ತಿನಲ್ಲಿ ಜಿಲ್ಲಾಡಳಿತ ತನ್ನ ವರಸೆ ಬದಲಾಯಿಸಿದ್ದು, ಮೊದಲು ನಿಗದಿ ಮಾಡಿದ ಸ್ಥಳವನ್ನು ಬಿಟ್ಟು ಬೆರೆ ಕಡೆ ರಸ್ತೆ ನಿರ್ಮಾಣ ಮಾಡುತ್ತಿದೆ.

YGR MEDICAL COLLEGE 1

ಅಲ್ಲದೇ ಇದಕ್ಕೆ ರೈತರಿಂದ ಯಾವುದೇ ಅನುಮತಿ ಕೂಡ ಜಿಲ್ಲಾಡಳಿತ ಪಡೆದಿಲ್ಲ. ಹೀಗಾಗಿ ಕೆಲ ರೈತರ ಅರ್ಧ ಜಮೀನು ಈ ರಸ್ತೆಯ ಪಾಲಾಗುತ್ತಿದೆ. ಇದು ಭೂಮಿ ಮಾಲೀಕರ ನೋವಿಗೆ ಕಾರಣವಾಗಿದೆ. ರುಕ್ಮಿಣಿ ಬಾಯಿ ಮತ್ತು ತಾರಾಬಾಯಿ ಚವ್ಹಾಣ ಅವರಿಗೆ ಸೇರಿದ ಜಾಗ ಸರ್ವೆ ನಂಬರ್ 2/2ರಲ್ಲಿ ಈ ಹಿಂದೆ ಗುರುತಿಸಿದ್ದಕ್ಕಿಂತ ಹೆಚ್ಚಿಗೆ ಜಾಗವನ್ನು ರಸ್ತೆ ಕಾಮಗಾರಿಗೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇದರ ಪರಿಣಾಮ ಈ ಮಹಿಳೆಯರ ಬಳಿ ಇರುವ ಹೊಲದಲ್ಲಿ ಶೇ. 95ರಷ್ಟು ಜಾಗ ರಸ್ತೆಗೆ ಹೋಗುತ್ತದೆ. ಇದರಿಂದ ಈ ಕುಟುಂಬಕ್ಕೆ ತಾವು ಬೀದಿಗೆ ಬೀಳುವ ಆತಂಕ ಎದುರಾಗಿದೆ.

ygr dc office

2017ರಲ್ಲಿ ಸಿದ್ಧವಾಗಿದ್ದ ರಸ್ತೆ ಕಾಮಾಗರಿ ನಕ್ಷೆಯಲ್ಲಿ ಸರ್ವೆ ನಂಬರ್ 2/2ರ 2 ಗುಂಟೆ ಜಾಗವನ್ನ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಆದರೆ ಪರಿಷ್ಕೃತ ರಸ್ತೆ ನಕ್ಷೆಯಲ್ಲಿ 14 ಗುಂಟೆ ಜಾಗವನ್ನ ಸ್ವಾಧೀನ ಪಡಿಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಹೆಚ್ಚುವರಿ ಜಾಗ ಪಡೆದುಕೊಳ್ತಿರುವ ಬಗ್ಗೆ ಮಾಲೀಕರಿಗೆ ಜಿಲ್ಲಾಡಳಿತ ಯಾವುದೇ ಮಾಹಿತಿ ನೀಡಿಲ್ಲ. ಇತ್ತ ಕಂದಾಯ ಇಲಾಖೆ ಅಧಿಕಾರಿಗಳು ರಾತ್ರೋರಾತ್ರಿ ಸರ್ವೆ ಮಾಡಿ, ಯಾವುದೇ ಮುನ್ಸೂಚನೆ ನೀಡದೆ ಜಾಗದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ.

ಇದರ ಹಿಂದೆ ಕೆಲ ಕಾಣದ ಕೈಗಳಿದ್ದು, ಪ್ರಭಾವಿಯೊಬ್ಬರ ಜಮೀನು ಉಳಿಸಲು ಕೆಲ ಅಧಿಕಾರಿಗಳು ಈ ರೀತಿ ಮಾಡಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ. ಆಸ್ಪತ್ರೆ ಮತ್ತು ಕಾಲೇಜು ನಿರ್ಮಾಣವಾಗುತ್ತಿರುವ ಹಿನ್ನೆಲೆ ಈ ಭೂಮಿಗೆ ಈಗ ಬಂಗಾರದ ಬೆಲೆ ಬಂದಿದ್ದು, ಇದರ ಹಿಂದೆ ರಿಯಲ್ ಎಸ್ಟೇಟ್ ಮಾಫಿಯಾದ ಕೈವಾಡಯಿದೆ ಎಂಬ ಆರೋಪವೂ ಕೇಳಿಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *