– ರೋಹಿತ್ ಖಾರ್ವಿ ಮೇಲಕ್ಕೆತ್ತಲು ಕಾರ್ಯಾಚರಣೆ
ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಎಂಬಲ್ಲಿ ಬೋರ್‌ವೆಲ್ ಸುತ್ತ ಮಣ್ಣು ಕುಸಿದಿದ್ದು, ಬೋರ್‌ವೆಲ್ ಪಕ್ಕ ಕೆಲಸ ಮಾಡುತ್ತಿದ್ದ ರೋಹಿತ್ ಖಾರ್ವಿ ಮಣ್ಣಿನಡಿ ಹುದುಗಿದ್ದಾರೆ. ರೋಹಿತ್ ಸ್ಥಳದಲ್ಲಿ ನಿಂತಿದ್ದ ಸಂದರ್ಭ ಕಾಲ ಬುಡದಲ್ಲಿದ್ದ ಮಣ್ಣು ಕುಸಿದಿದೆ.
ಬೋರ್‌ವೆಲ್ ಪೈಪಿನ ಸುತ್ತ ಮಣ್ಣು ಕುಸಿದಿದ್ದರಿಂದ ರೋಹಿತ್ ಖಾರ್ವಿ ಸುಮಾರು 15 ಅಡಿಗೆ ಕುಸಿದಿದ್ದಾರೆ. ರೋಹಿತ್ ಕುತ್ತಿಗೆಯವರೆಗೆ ಮಣ್ಣೊಳಗೆ ಹುದುಗಿ ಹೋಗಿದ್ದಾರೆ. ಎಡಗೈ ಹೂತು ಹೋಗಿದೆ. ಸ್ಥಳದಲ್ಲಿದ್ದ ಇತರೆ ಕೆಲಸಗಾರರು ರೋಹಿತ್ ಅವರನ್ನು ಮೇಲಕ್ಕೆತ್ತಲು ಕೂಡಲೇ ಕಾರ್ಯಾಚರಣೆ ನಡೆಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ, ವೈದ್ಯರು ಮಣ್ಣು ಮೇಲಕ್ಕೆತ್ತುವ ತಜ್ಞರನ್ನು ಸ್ಥಳಕ್ಕೆ ಕರೆಸಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ನೂರಾರು ಜನ ಸ್ಥಳದಲ್ಲಿ ಜಮಾಯಿಸಿದರು. ಬೋರ್‌ವೆಲ್ ಹೊಂಡದ ಸುತ್ತ ಜನ ಜಮಾಯಿಸಿದ್ದರಿಂದ ಇನ್ನಷ್ಟು ಮಣ್ಣು ಕೆಳಗೆ ಬೀಳುವ ಸಂಭವವಿತ್ತು. ತಕ್ಷಣ ಎಚ್ಚೆತ್ತುಕೊಂಡ ಅಗ್ನಿಶಾಮಕ ಸಿಬ್ಬಂದಿ ಜನರನ್ನು ದೂರಕ್ಕೆ ಕಳುಹಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮವಾಗಿ ಒಂದು ದೊಡ್ಡ ಪ್ಲಾಸ್ಟಿಕ್ ಡ್ರಮ್ ರೋಹಿತ್ ಕಾರ್ವಿ ಸುತ್ತ ಭೂಮಿಯೊಳಗೆ ಇಳಿಸಿದ್ದಾರೆ. ಸುತ್ತಲ ಮಣ್ಣು ಇನ್ನಷ್ಟು ಕೆಳಗೆ ಕುಸಿಯದಂತೆ ರಕ್ಷಣೆ ನೀಡಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಏಣಿಯನ್ನು ಕಟ್ಟಿ ಹಗ್ಗದ ಮೂಲಕ ಹೊಂಡದೊಳಗೆ ಇಳಿದಿದ್ದಾರೆ. ರೋಹಿತ್ ಖಾರ್ವಿ ಉಸಿರಾಟ ನಡೆಸುತ್ತಿದ್ದು, ಅಗ್ನಿಶಾಮಕ ಸಿಬ್ಬಂದಿ ಜೊತೆ ಮಾತನಾಡುತ್ತಿದ್ದಾನೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ಆಕ್ಸಿಜನ್ ಸಿಲಿಂಡರನ್ನು ಸ್ಥಳಕ್ಕೆ ರವಾನೆ ಮಾಡಿದ್ದು, ಆಮ್ಲಜನಕವನ್ನು ಕೊಡಲಾಗುತ್ತಿದೆ. ಹಸಿ ಮಣ್ಣು ಬಿಗಿದುಕೊಂಡಿದ್ದರಿಂದ ಪಕ್ಕದಲ್ಲಿ ಜೆಸಿಬಿ ಮೂಲಕ ಮತ್ತೊಂದು ಹೊಂಡ ಮಾಡಿ ರೋಹಿತ್ ನನ್ನ ಮೇಲಕ್ಕೆತ್ತುವ ಪ್ರಕ್ರಿಯೆ ನಡೆಯುತ್ತಿದೆ.
ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿದರೆ, ರೋಹಿತ್ ಖಾರ್ವಿಯನ್ನು ಹೊಂಡದಿಂದ ಮೇಲೆತ್ತಬಹುದು ಎಂದು ಅಗ್ನಿಶಾಮಕ ಸಿಬ್ಬಂದಿಗಳು ತಿಳಿಸಿದ್ದಾರೆ.