ಬೆಂಗಳೂರು: ಮುನಿಸಿಕೊಂಡು ಅರಣ್ಯ ಖಾತೆ ಪಡೆಯಲು ಯಶಸ್ವಿಯಾದ ಸಚಿವ ಆನಂದ್ ಸಿಂಗ್‍ಗೆ ಈಗ ಖಾತೆ ಕೈ ಬಿಡೋ ಭೀತಿ ಶುರುವಾಗಿದೆ. ತಮ್ಮ ಮೇಲೆ ಅರಣ್ಯ ಒತ್ತುವರಿ ಕೇಸ್‍ಗಳು ಇರುವುದರಿಂದ ಸಿಎಂ ಯಡಿಯೂರಪ್ಪ ಮೇಲೆ ಆನಂದ್ ಸಿಂಗ್ ಖಾತೆ ವಾಪಸ್ ಪಡೆಯೋಕೆ ದೊಡ್ಡ ಮಟ್ಟದ ಒತ್ತಡಗಳು ಬರುತ್ತಿವೆ. ಹೀಗಾಗಿ ಆತಂಕಗೊಂಡಿರೋ ಸಚಿವ ಆನಂದ್ ಸಿಂಗ್ ಇಂದು ಸಿಎಂ ಯಡಿಯೂರಪ್ಪರನ್ನ ಅವರ ನಿವಾಸದಲ್ಲಿ ಭೇಟಿಯಾಗಿ ತಮ್ಮ ಕೇಸ್‍ಗಳ ಬಗ್ಗೆ ವಿವರಣೆ ನೀಡಿದ್ದಾರೆ ಅನ್ನೋ ಮಾಹಿತಿಗಳು ಲಭ್ಯವಾಗಿವೆ.
ಅರಣ್ಯ ಒತ್ತುವರಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ಮಾಡಿರೋ ಆರೋಪ ಸಚಿವ ಆನಂದ್ ಸಿಂಗ್ ಮೇಲೆ ಇದೆ. ಎಸ್‍ಐಟಿ ಹಾಗೂ ಲೋಕಾಯುಕ್ತದಲ್ಲಿ ಸುಮಾರು 11 ಕೇಸ್ ಗಳು, ಸಿಬಿಐ ನಲ್ಲಿ ಸುಮಾರು 3 ಕೇಸ್ ಗಳು, ಜಿಲ್ಲಾ ನ್ಯಾಯಾಲಯದಲ್ಲಿ ಒಂದು ಕೇಸ್ ಆನಂದ್ ಸಿಂಗ್ ಮೇಲೆ ಇವೆ. ಬಹುತೇಕ ಈ ಕೇಸ್‍ಗಳು ಅರಣ್ಯ ಇಲಾಖೆ ವ್ಯಾಪ್ತಿಗೆ ಬರಲಿವೆ. ಹೀಗಾಗಿ ಈ ಖಾತೆ ಅವರಿಗೆ ಕೊಟ್ಟರೆ ತಮ್ಮ ಪ್ರಭಾವ ಬಳಸಿ ಕೇಸ್ ಮೇಲೆ ಪರಿಣಾಮ ಬೀರುವಂತೆ ಮಾಡಬಹುದು ಅನ್ನೋ ಅನುಮಾನಗಳು ವ್ಯಕ್ತವಾಗುತ್ತಿವೆ. ಹೀಗಾಗಿ ಅರಣ್ಯ ಖಾತೆ ವಾಪಸ್ ಪಡೆದು ಬೇರೆ ಖಾತೆ ಕೊಡಿ ಅಂತ ಸಾಮಾಜಿಕ ಜಾಲತಾಣ ಮತ್ತು ಬಿಜೆಪಿ ಆಂತರಿಕ ವಲಯದಲ್ಲೂ ಕೇಳಿ ಬರುತ್ತಿವೆ.
ಆನಂದ್ ಸಿಂಗ್ ಮೇಲೆ ಕೇಸ್‍ಗಳು ಇರೋ ವಿಚಾರವಾಗಿ ಖುದ್ದು ಹೈಕಮಾಂಡ್ ವರದಿ ನೀಡುವಂತೆ ಸಿಎಂಗೆ ಸೂಚನೆ ನೀಡಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಆನಂದ್ ಸಿಂಗ್‍ರನ್ನ ಕರೆಸಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಿಎಂ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನಿಡೋದಕ್ಕೆ ಸಚಿವ ಆನಂದ್ ಸಿಂಗ್ ನಿರಾಕರಣೆ ಮಾಡಿದ್ದಾರೆ.
ಸಿಎಂ ಭೇಟಿ ಮಾಡಿದ ಸಚಿವ ಆನಂದ್ ಸಿಂಗ್, ತಮ್ಮ ಕೇಸ್‍ಗಳ ಬಗ್ಗೆ ವಿವರಣೆ ನೀಡಿದ್ದಾರಂತೆ. ಅನೇಕ ಕೇಸ್‍ಗಳಿಗೆ ತಡೆಯಾಜ್ಞೆ ಇದೆ. ಕೆಲಸ, ಕೇಸ್ ಗಳು ಮಾತ್ರ ವಿಚಾರ ಆಗ್ತಿದೆ. ಯಾವುದೇ ಕೇಸ್‍ನಲ್ಲಿ ಆರೋಪ ಸಾಬೀತಾಗಿಲ್ಲ. ಹೀಗಾಗಿ ಖಾತೆ ವಾಪಸ್ ಪಡೆಯಬೇಡಿ ಅಂತ ಸಿಎಂಗೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಆನಂದ್ ಸಿಂಗ್ ರಿಂದ ಪ್ರಕರಣಗಳ ಮಾಹಿತಿ ಪಡೆದಿರೋ ಸಿಎಂ ಯಡಿಯೂರಪ್ಪ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.