ಸೋತವರಿಗೆ ಹುದ್ದೆ ಕೊಟ್ರೆ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಮಾಡಿದಂತಲ್ಲ: ಎಂಟಿಬಿ ಸಮರ್ಥನೆ

Public TV
1 Min Read
MTB 3

ಬೆಂಗಳೂರು: ಉಪಚುನಾವಣೆಯಲ್ಲಿ ಸೋತ ಬಳಿಕ ಶತಾಯಗತಾಯ ಸಚಿವರಾಗಲು ಮಾಜಿ ಸಚಿವ ಎಂಟಿಬಿ ನಾಗರಾಜ್ ಹವಣಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೆಚ್.ವಿಶ್ವನಾಥ್ ರೀತಿ ಎಂಟಿಬಿ ಸಹ ನಿರಂತರ ಕಸರತ್ತು ನಡೆಸಿದ್ದಾರೆ. ಇವತ್ತೂ ಸಹ ಬೆಂಗಳೂರಿನ ಧವಳಗಿರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿದ ಎಂಟಿಬಿ ನಾಗರಾಜ್, ಸಚಿವ ಸ್ಥಾನಕ್ಕೆ ಒತ್ತಾಯಿಸಿದ್ದಾರೆ. ಸಿಎಂ ಭೇಟಿ ಬಳಿಕ ಮಾತಾಡಿದ ಎಂಟಿಬಿ ನಾಗರಾಜ್, ನಾನು ಯಾವ ಹುದ್ದೆಯನ್ನೂ ಕೇಳಿಲ್ಲ. ಸಿಎಂ ಯಾವ ಸ್ಥಾನ ಕೊಟ್ರೂ ಸಂತೋಷದಿಂದ ಸ್ವೀಕಾರ ಮಾಡ್ತೇನೆ ಅಂದ್ರು.

MTB 2

ಇನ್ನು ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂದು ಬಿಜೆಪಿ ನಾಯಕರ ಇತ್ತೀಚಿನ ಹೇಳಿಕೆಗಳಿಂದ ಬೇಸರಗೊಂಡಿರುವ ಎಂಟಿಬಿ ನಾಗರಾಜ್, ಈ ನಿಟ್ಟಿನಲ್ಲಿ ನಿವೃತ್ತ ಸುಪ್ರೀಂಕೋರ್ಟ್ ಜಡ್ಜ್ ಒಬ್ಬರಿಂದ ಕಾನೂನು ಸಲಹೆಯನ್ನೂ ಪಡೆದುಕೊಂಡಿದ್ದಾರೆ. ಕಾನೂನು ಸಲಹೆ ಪಡೆದ ಬಗ್ಗೆ ಮಾತಾಡಿರುವ ಎಂಟಿಬಿ ನಾಗರಾಜ್, ಸೋತವರಿಗೆ ಸಚಿವ ಸ್ಥಾನ ಇಲ್ಲ ಅಂದಿದ್ದಕ್ಕೆ ನಾನು ಕಾನೂನು ಅಭಿಪ್ರಾಯ ಪಡೆದಿದ್ದೇನೆ. ಒಮ್ಮೆ ನಾಮಪತ್ರ ಸಲ್ಲಿಸಿ ಅದು ಸ್ವೀಕಾರವಾಗಿ ಚುನಾವಣೆಯಲ್ಲಿ ಗೆಲ್ಲಲಿ ಅಥವಾ ಸೋಲಲಿ ಅಲ್ಲಿಗೆ ಸುಪ್ರೀಂಕೋರ್ಟ್ ಆದೇಶ ರದ್ದಾಗುತ್ತೆ. ಅದರ ನಂತರ ಯಾವುದೇ ಹುದ್ದೆ ಪಡೆಯಬಹುದು ಅಂತ ಕಾನೂನು ತಜ್ಞರು ಅಭಿಪ್ರಾಯ ನೀಡಿದ್ದಾರೆ. ಸಿಎಂ ಬಳಿಯೂ ಕಾನೂನು ಅಭಿಪ್ರಾಯ ಬಗ್ಗೆ ಚರ್ಚೆ ಮಾಡಿದ್ದೇನೆ. ಇದರ ಬಗ್ಗೆ ಪರಿಶೀಲನೆ ಮಾಡೋಣ ಅಂತ ಸಿಎಂ ಹೇಳಿದ್ದಾರೆ ಎಂದು ಎಂಟಿಬಿ ನಾಗರಾಜ್ ಹೇಳಿದ್ರು.

MTB 1

 

ಮುಂದುವರೆದು ಮಾತಾಡಿದ ಎಂಟಿಬಿ ನಾಗರಾಜ್, ನಾನು ನಿಗಮ ಮಂಡಳಿ ಕೊಟ್ರೆ ಸಾಕು ಅನ್ನೋ ಹಂತಕ್ಕೆ ಬಂದಿಲ್ಲ. ನಾನು ಸ್ಥಾನ ಬೇಕು ಅನ್ನುವ ಕಂಡೀಷನ್ ಹಾಕಿ ಬಿಜೆಪಿಗೆ ಬಂದಿಲ್ಲ. ಮೈತ್ರಿ ಸರ್ಕಾರದಲ್ಲಿ ಬೇಸತ್ತು ಬಿಜೆಪಿಗೆ ಬಂದಿದ್ದೇನೆ. ಜೂನ್ ನಲ್ಲಿ ನನಗೂ ಎಮ್ಮೆಲ್ಸಿ ಮಾಡುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *