ನಕಲಿ, ಕಳಪೆ ಕೀಟನಾಶಕ ಮಾರಿದ್ರೆ 5 ವರ್ಷ ಜೈಲು ಶಿಕ್ಷೆ

Public TV
2 Min Read
Pesticides agirculture

– ರೈತರ ರಕ್ಷಣೆಗೆ ಮಂಡನೆಯಾಗಲಿದೆ ಮಸೂದೆ
– ನಷ್ಟವಾದರೆ ಕಂಪನಿಗಳಿಂದಲೇ ಪರಿಹಾರ
– ಕೀಟನಾಶಕಗಳ ಬೆಲೆ ನಿಯಂತ್ರಿಸಲು ಪ್ರಾಧಿಕಾರ ರಚನೆ

ನವದೆಹಲಿ: ನಕಲಿ, ಕಳಪೆ ಕೀಟನಾಶಕ ಮಾರಿದರೆ ಗರಿಷ್ಠ 5 ವರ್ಷ ಜೈಲು ಶಿಕ್ಷೆ ವಿಧಿಸುವ ‘ಕೀಟನಾಶಕ ನಿರ್ವಹಣಾ ಮಸೂದೆ -2020’ಕ್ಕೆ ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.

ನಕಲಿ ಕೀಟನಾಶಕ ಬಳಸಿ ನಷ್ಟ ಉಂಟಾದಲ್ಲಿ ರೈತರಿಗೆ ಪರಿಹಾರ ನೀಡುವ ಮಸೂದೆಯನ್ನು ಬಜೆಟ್ ಅಧಿವೇಶನದ ಎರಡನೇ ಅವಧಿಯಲ್ಲಿ ಮಂಡಿಸುವುದಕ್ಕೆ ಕ್ಯಾಬಿನೆಟ್ ಬುಧವಾರ ಒಪ್ಪಿಗೆ ನೀಡಿತು.

Pesticides agirculture 1 3

ಕೀಟನಾಶಕ ಕಾಯ್ದೆ -1968ರ ಜಾಗವನ್ನು ಈ ಮಸೂದೆ ತುಂಬಲಿದೆ. ಪ್ರಸ್ತಾವಿತ ಮಸೂದೆಯಲ್ಲಿ ರೈತರ ಹಾದಿ ತಪ್ಪಿಸಿ ಮೋಸ ಆಗದೇ ಇರಲು ಕೀಟನಾಶಕಗಳ ಜಾಹೀರಾತುಗಳ ಮೇಲೂ ನಿಗಾ ವಹಿಸಲಿದೆ.

ಮಸೂದೆಯಲ್ಲಿ ಏನಿದೆ?
ಕೀಟನಾಶಕಗಳಿಗೆ ನಿರ್ಧಿಷ್ಟ ಬೆಲೆಯನ್ನು ನಿಗದಿ ಪಡಿಸಲು ಪ್ರಾಧಿಕಾರ ರಚನೆ ಮಾಡಲಾಗುತ್ತದೆ. ಎಲ್ಲ ಕೀಟನಾಶಕ ಕಂಪನಿಗಳು ಹೊಸ ಕಾಯ್ದೆಯಡಿ ಕಡ್ಡಾಯವಾಗಿ ನೋಂದಣಿಯಾಗಬೇಕು. ಕಳಪೆ ಅಥವಾ ನಕಲಿ ಕೀಟನಾಶಕಗಳಿಂದ ರೈತರಿಗೆ ಮೋಸವಾದರೆ ಪರಿಹಾರ ನೀಡಲಾಗುತ್ತದೆ. ಕಂಪನಿಗಳ ಮೇಲೆ ಹಾಕಲಾದ ದಂಡ ಸಂಗ್ರಹಿಸಲು ಕೇಂದ್ರೀಯ ನಿಧಿಯನ್ನು ಸ್ಥಾಪಿಸಲಾಗುತ್ತದೆ. ಸಂಗ್ರಹಗೊಂಡ ಹಣದಿಂದ ರೈತರಿಗೆ ಪರಿಹಾರ ನೀಡಲಾಗುತ್ತದೆ.

Pesticides agirculture 1 1

ಶಿಕ್ಷೆ ಏನು?
ಷರತ್ತು, ನಿಯಮಗಳನ್ನು ಉಲ್ಲಂಘಿಸಿದರೆ ಕನಿಷ್ಠ 25 ಸಾವಿರ ರೂಪಾಯಿಯಿಂದ ಗರಿಷ್ಠ 50 ಲಕ್ಷ ರೂಪಾಯಿ ತನಕ ದಂಡವನ್ನೂ ಮತ್ತು ಗರಿಷ್ಠ 5 ವರ್ಷ ಜೈಲು ಶಿಕ್ಷೆಯನ್ನೂ ವಿಧಿಸುವ ಅಂಶವನ್ನು ಮಸೂದೆಯಲ್ಲಿ ಸೇರಿಸಲಾಗಿದೆ.

ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಖಾತೆಯ ಸಚಿವ ಪ್ರಕಾಶ್ ಜಾವಡೇಕರ್ ಪ್ರತಿಕ್ರಿಯಿಸಿ, ರೈತರ ಅಭಿವೃದ್ಧಿ ನಮ್ಮ ಸರ್ಕಾರದ ಪ್ರಾಥಮಿಕ ಆಧ್ಯತೆಯಾಗಿದ್ದು, ಯಾವುದೇ ರೀತಿಯಲ್ಲೂ ಕೃಷಿಕರಿಗೆ ವಂಚನೆ ಆಗಬಾರದು. ಈ ನಿಟ್ಟಿನಲ್ಲಿ ಕೀಟನಾಶಕ ಕಂಪನಿಗಳ ಮೋಸವನ್ನು ತಪ್ಪಿಸಲು ಈ ಮಸೂದೆಯನ್ನು ಮಂಡಿಸಲಾಗುತ್ತಿದೆ. ಕೃಷಿಕರಿಗೆ ಕೀಟನಾಶಕಗಳ ಬಲ ಮತ್ತು ದೌರ್ಬಲ್ಯಗಳ ಬಗ್ಗೆ ವಿವರ ನೀಡಿ ಅದರ ಅಪಾಯದ ಕುರಿತು ಮಾಹಿತಿ ನೀಡಲಾಗುತ್ತದೆ. ಅಷ್ಟೇ ಅಲ್ಲದೇ ಕೀಟನಾಶಕಕ್ಕೆ ಪರ್ಯಾಯ ಯಾವುದು ಎಂಬ ಮಾಹಿತಿಯೂ ಸಾರ್ವಜನಿಕವಾಗಿ ಡಿಜಿಟಲ್ ಮಾದರಿಯಲ್ಲಿ ಎಲ್ಲ ಭಾಷೆಗಳಲ್ಲಿ ಲಭ್ಯವಿರುತ್ತದೆ. ಇದನ್ನು ನೋಡಿಕೊಂಡು ರೈತರು ತಮ್ಮ ಬೆಳೆಗೆ ಯಾವ ಕೀಟನಾಶಕ ಉತ್ತಮ ಎಂಬ ನಿರ್ಧಾರಕ್ಕೆ ಬರಬಹುದು ಎಂದು ಅವರು ತಿಳಿಸಿದರು.

agirculture land

ರೈತರಿಗೆ ಮೋಸ ಮಾಡುವ ಕಂಪನಿಗಳಿಗೆ ದಂಡ ವಿಧಿಸುವುದು ಈ ಮಸೂದೆಯ ವಿಶೇಷ ಅಂಶವಾಗಿದೆ. ತಯಾರಕರು ಮತ್ತು ಡೀಲರ್ ಗಳಿಂದ ದಂಡವನ್ನು ಸಂಗ್ರಹಿಸಿ ಕೇಂದ್ರೀಯ ನಿಧಿಯ ಮೂಲಕ ರೈತರಿಗೆ ಪರಿಹಾರ ನೀಡಲಾಗುವುದು. ಕೀಟನಾಶಕಗಳ ಬಲ ಮತ್ತು ದೌರ್ಬಲ್ಯಗಳ ವಿವರವನ್ನು ಕೃಷಿಕರು ಡೀಲರ್ ಬಳಿಯಿಂದ ಪಡೆಯಬಹುದು ಎಂದು ಅವರು ವಿವರಿಸಿದರು.

ಈಗ ಯಾಕೆ?
ಸಾವಯವ ಕೀಟನಾಶಕಗಳಿಗೆ ಉತ್ತೇಜನ ನೀಡುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ. ಈ ಮಸೂದೆ 2008ರಲ್ಲಿ ರಾಜ್ಯಸಭೆಯಲ್ಲಿ ಮಂಡನೆಯಾಗಿತ್ತು. ಆದರೆ ಮಸೂದೆ ಕೃಷಿ ಸ್ಥಾಯಿ ಸಮಿತಿ ಪರಿಶೀಲನೆಗೆ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಮಂಡನೆಯಾಗಿರಲಿಲ್ಲ. ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ 2017-18ರಲ್ಲಿ ಈ ಸಂಬಂಧ ಕರಡು ಮಸೂದೆಯನ್ನು ರಚಿಸಲಾಗಿತ್ತು.

ವಿಶ್ವದಲ್ಲೇ ಅತಿ ಹೆಚ್ಚು ಕೀಟನಾಶಕಗಳ ಗ್ರಾಹಕ ದೇಶ ಭಾರತವಾಗಿದ್ದು, ದೇಶದಲ್ಲಿ ಅಂದಾಜು 292 ಕೀಟನಾಶಕಗಳು ನೋಂದಣಿಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *