ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಟ್ರಂಪ್‍ಗೆ ವೇದಿಕೆ ಕಲ್ಪಿಸಿಕೊಟ್ಟ ಮೋದಿ

Public TV
2 Min Read
trump 2

– ಹೌಡಿ ಮೋದಿ ಮಾದರಿಯಲ್ಲೇ ‘ಕೇಮ್ ಚೋ ಟ್ರಂಪ್’
– 60, 70 ಸಾವಿರ ಜನ ಭಾಗವಹಿಸುವ ಸಾಧ್ಯತೆ
– 1.10 ಲಕ್ಷ ಆಸನಗಳಿರುವ ಅಹಮದಾಬಾದ್‍ನ ಸ್ಟೇಡಿಯಂಲ್ಲಿ ಟ್ರಂಪ್ ಮಾತು

ಗಾಂಧಿನಗರ: ‘ಹೌಡಿ ಮೋದಿ’ ಕಾರ್ಯಕ್ರಮದ ಮಾದರಿಯಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ವೇದಿಕೆ ಕಲ್ಪಿಸಿಕೊಡಲು ಪ್ರಧಾನಿ ನರೇಂದ್ರ ಮೋದಿ ಸಿದ್ಧತೆ ನಡೆಸಿದ್ದಾರೆ.

ಅಮೆರಿಕದ ಅನಿವಾಸಿ ಭಾರತೀಯರು ಹೂಸ್ಟನ್‍ನಲ್ಲಿ ಆಯೋಜಿಸಿದ್ದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಟ್ರಂಪ್ ಭಾಗವಹಿಸಿದ್ದರು. ಅಲ್ಲಿನ ಅನಿವಾಸಿ ಭಾರತೀಯರ ಜೊತೆಗೆ ಕೆಲ ವಿಚಾರಗಳನ್ನು ಹಂಚಿಕೊಳ್ಳಲು ಪ್ರಧಾನಿ ಮೋದಿ ಅವರಿಗೆ ಸಹಾಯಕವಾಗಿತ್ತು. ಹೀಗಾಗಿ ಭಾರತಕ್ಕೆ ಆಗಮಿಸುತ್ತಿರುವ ಟ್ರಂಪ್ ಅವರಿಗೆ ಇಂತಹದ್ದೇ ವೇದಿಕೆ ಕಲ್ಪಿಸಿಕೊಡಲು ‘ಕೇಮ್ ಚೋ ಟ್ರಂಪ್’ ಸಾರ್ವಜನಿಕ ಸಭೆಗೆ ಭಾರೀ ಸಿದ್ಧತೆ ನಡೆದಿದೆ.

Trump Modi A

ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಫೆಬ್ರವರಿ 24 ಹಾಗೂ 25 ರಂದು ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಮೆರಿಕ ಫಸ್ಟ್ ಲೇಡಿ ಮೆಲಾನಿಯಾ ಟ್ರಂಪ್ ಕೂಡ ಭಾರತಕ್ಕೆ ಆಗಮಿಸುತ್ತಿದ್ದಾರೆ. ನವದೆಹಲಿಗೆ ಆಗಮಿಸಲಿರುವ ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿ 25 ರಂದು ಗುಜರಾತ್‍ನ ಅಹಮದಾಬಾದ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಜಂಟಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಅಮೆರಿಕದ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ನಾನು ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ. ಅಹಮದಾಬಾದ್‍ನಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಜೊತೆಗಿನ ಜಂಟಿ ಸಾರ್ವಜನಿಕ ಸಭೆಯಲ್ಲಿ 50 ರಿಂದ 70 ಸಾವಿರ ಜನರನ್ನು ಸೇರಿಸುವುದಾಗಿ ಭಾರತದ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಈ ಪ್ರವಾಸವನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Trump Modi

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಹಾನ್ ವ್ಯಕ್ತಿ. ಈ ತಿಂಗಳ ಕೊನೆಯ ವಾರದಲ್ಲಿ ನಾನು ಭಾರತದ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಪ್ರವಾಸಕ್ಕೆ ಕುತೂಹಲದಿಂದ ಕಾಯುತ್ತಿರುವೆ ಎಂದು ಹೇಳಿದ್ದಾರೆ.

ಅಹಮದಾಬಾದ್ ಸ್ಟೇಡಿಯಂ ಯಾಕೆ?
ಅಹಮದಾಬಾದ್ ಕ್ರೀಡಾಂಗಣ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿದೆ. ಇದು 1.10 ಲಕ್ಷ ಆಸನಗಳ ವ್ಯವಸ್ಥೆಗಳನ್ನು ಹೊಂದಿದೆ. ಹೀಗಾಗಿ ಇಲ್ಲಿ 60ರಿಂದ 50 ಸಾವಿರ ಜನರು ಸೇರಲಿದ್ದಾರೆ.

Ahmedabad stadium

ಅಹಮದಾಬಾದ್ ಸ್ಟೇಡಿಯಂನಲ್ಲಿ 1982ರಿಂದ 2015ರ ವರೆಗೂ 49,000 ಆಸನಗಳ ವ್ಯವಸ್ಥೆ ಇತ್ತು. ಕಳೆದ ಐದು ವರ್ಷಗಳಿಂದ ಅದನ್ನು ದುರಸ್ತಿಗೊಳಿಸಿ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿ ಮಾಡಲಾಗಿದೆ. ಡೊನಾಲ್ಡ್ ಟ್ರಂಪ್ ಸಮ್ಮುಖದಲ್ಲಿ ಈ ಸ್ಟೇಡಿಯಂ ಉದ್ಘಾಟನೆಯಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *