-100ನೇ ದಿನಕ್ಕೆ ಕಾಲಿಟ್ಟ ಸರೋಜಿನಿ ಮಹಿಷಿ ಧರಣಿ
ಬೆಂಗಳೂರು: ಕನ್ನಡಿಗರಿಗೆ ಕರ್ನಾಟಕದ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಿ ಎಂದು ಕನ್ನಡ ಪರ ಸಂಘಟನೆಗಳು ಮಾಡುತ್ತಿರುವ ಧರಣಿ 100ನೇ ದಿನಕ್ಕೆ ಕಾಲಿಟ್ಟಿದೆ.
ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ವಿನಯ್ ಗುರೂಜಿ ಮತ್ತು ಮಾಜಿ ಸಚಿವ ಯು.ಟಿ ಖಾದರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೌರ್ಯ ಸರ್ಕಲ್‍ನಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಆಗಮಿಸಿ, 100 ದಿನದ ಹೋರಾಟವನ್ನ ದೀಪ ಬೆಳಗುವುದರ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಿದ ವಿನಯ್ ಗುರೂಜಿ, ಕರ್ನಾಟಕದಲ್ಲಿ ಕನ್ನಡಿಗರು ವಿಷ ಕುಡಿಯೋಕೆ ಅವಕಾಶ ಸರ್ಕಾರ ಮಾಡಿಕೊಡಬಾರದು. ಬೇರೆ ರಾಜ್ಯದವರಿಗೆ ಕೆಲಸ ಕೊಡೋದಲ್ಲ ನಮ್ಮ ರಾಜ್ಯದವರಿಗೆ ಕೆಲಸ ಕೊಡಿ. ನಮ್ಮ ಮನೆ ಪೈಂಟ್ ಮೊದಲು ಮಾಡಿ ಆ ಮೇಲೆ ಬೇರೆ ಮನೆ ಪೈಂಟ್ ಮಾಡಿ. ನಾನು ತನು, ಮನ, ಧನ ಎಲ್ಲಾ ಮರೆತು ಇದಕ್ಕೆ ಕೆಲಸ ಮಾಡುತ್ತೇನೆ. ಸಿಎಂ ಯಡಿಯೂರಪ್ಪನವರ ಜೊತೆ ಮಾತನಾಡುತ್ತೇನೆ ಎಂದರು.
ಯಾವುದೇ ಗುರೂಜಿಯಾಗಿ ನಾನಿಲ್ಲಿ ಬಂದಿಲ್ಲ. ಸಾಮಾನ್ಯ ಕನ್ನಡಿಗನಾಗಿ ಇಲ್ಲಿಗೆ ಬಂದಿದ್ದೇನೆ. ಇಲ್ಲಿ ಕುಳಿತಿರುವ ಎಲ್ಲರು ಕನ್ನಡಿಗರೇ, ಕನ್ನಡಿಗರ ವೋಟಿನಿಂದ ಸರ್ಕಾರ ಇದೆ. ನಾನೊಬ್ಬ ಗುರೂಜಿಯಾಗಲ್ಲ ಕನ್ನಡಿಗನಾಗಿ ಯಡಿಯೂರಪ್ಪನವರ ಜೊತೆ ಮಾತನಾಡುತ್ತೇನೆ. ಇದು ಭರವಸೆ ಅಲ್ಲ ಇದು ನನ್ನ ಕರ್ತವ್ಯ. ಈ ಹೋರಾಟಕ್ಕೋಸ್ಕರ ನಾನು ಇವತ್ತು ಒಂದು ಹೊತ್ತಿನ ಊಟ ಬಿಡುತ್ತಿದ್ದೀನಿ. ಎಲ್ಲರಿಗೂ ಇದು ಮಾದರಿಯಾಗಬೇಕು ಹೋರಾಟ ಮುಂದುವರೆಯಲಿ ಎಂದು ಹೇಳಿದರು.
ಕಳೆದ ನವಂಬರ್ 1ರಿಂದ ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ಅನಿರ್ಧಿಷ್ಟ ಅವದಿ ಪ್ರತಿಭಟನೆ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಪ್ರಾರಂಭವಾಗಿದ್ದು, ಇಂದಿಗೆ 100ನೇ ದಿನಕ್ಕೆ ಕಾಲಿಟ್ಟಿದೆ.
100 ದಿನ ಧರಣಿ ಮಾಡಿದರೂ ಸರ್ಕಾರದಿಂದ ಡಾ. ಸರೋಜಿನಿ ಮಹಿಷಿ ವರದಿಯನ್ನ ಅನುಷ್ಠಾನಗೊಳಿಸುವ ಯಾವುದೇ ರೀತಿಯ ಭರವಸೆಗಳು ಸಿಕ್ಕಿಲ್ಲ. ಡಾ. ಸರೋಜಿನಿ ಮಹಿಷಿ ವರದಿಯನ್ನ ಜಾರಿಗೆ ತಂದರೆ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳು ರಾಜ್ಯೋತ್ಸವದ ದಿನದಿಂದ ಹೋರಾಟವನ್ನ ಮಾಡಿಕೊಂಡು ಬಂದಿದೆ.