ಬೆಂಗಳೂರು: ಸತತ ಇಪ್ಪತ್ತು ಗಂಟೆಗಳ ಕಾರ್ಯಾಚರಣೆ ನಂತರ ಕಲ್ಕೆರೆ ಕೆರೆಯಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಟೆಕ್ಕಿ ಸಚಿನ್ ಮೃತದೇಹವನ್ನು ಇಂದು ಮಧ್ಯಾಹ್ನದ ವೇಳೆಗೆ ಪತ್ತೆ ಮಾಡಲಾಗಿದೆ.
ಶನಿವಾರದಿಂದ ಕಾರ್ಯಾಚರಣೆ ನಡೆಸಿದ್ದ ಎನ್.ಡಿ.ಆರ್.ಎಫ್ ಮತ್ತು ಅಗ್ನಿಶಾಮಕದಳ ಅಧಿಕಾರಿಗಳ ತಂಡ ಇವತ್ತೂ ಕೂಡ ಶೋಧ ಕಾರ್ಯ ಮುಂದುವರಿಸಿತ್ತು. ಇಂದು ಮಧ್ಯಾಹ್ನದ ವೇಳೆಗೆ ಟೆಕ್ಕಿ ಶವವನ್ನ ಹುಡುಕಿ ಮೇಲೆತ್ತಿದ್ದಾರೆ. ಒಟ್ಟಾರೆಯಾಗಿ 20 ಗಂಟೆಗಳ ಕಾರ್ಯಾಚರಣೆ ನಡೆಸಿ, ನೀರಿನಿಂದ ಟೆಕ್ಕಿ ಸಚಿನ್ ಮೃತದೇಹವನ್ನು ಹೊರತಂದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಧ್ಯಾಹ್ನ ಕೆರೆ ಬಳಿಯಿಂದ ಆಂಬುಲೆನ್ಸ್ ನಲ್ಲಿ ಶವವನ್ನು ಅಂಬೇಡ್ಕರ್ ಆಸ್ಪತ್ರೆಗೆ ತರಲಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸ್ಥಳೀಯ ಪೊಲೀಸರು, ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ರಾಮಮೂರ್ತಿನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವೀಕೆಂಡ್‍ನ ಮಧ್ಯರಾತ್ರಿಯಲ್ಲಿ ಕುಡಿದು ತೆಪ್ಪದಲ್ಲಿ ವಿಹಾರಕ್ಕೆ ಹೋಗದೆ ಮನೆ ಕಡೆ ದಾರಿ ನೋಡಿದ್ದರೆ ಇವತ್ತು ಸಚಿನ್ ಸಾವನ್ನಪ್ಪುತ್ತಿರಲಿಲ್ಲ. ಕುಡಿದ ಮತ್ತಿನಲ್ಲಿ ನೀರಿಗೆ ಇಳಿಯೋದು, ಈಜಾಡುವುದು, ಸಾಹಸ ಮಾಡೋಕೆ ಹೋಗುವುದು ಇವೆಲ್ಲವನ್ನೂ ಮಾಡಬಾರದು ಅನ್ನೋದಕ್ಕೆ ಸಚಿನ್ ಸಾವು ಒಂದು ಉದಾಹರಣೆಯಾಗಿದೆ.