ಬೆಂಗಳೂರು: ವಲಸೆ ಹಕ್ಕಿಗಳಲ್ಲಿ 11ರಲ್ಲಿ 10 ಶಾಸಕರನ್ನು ಮಂತ್ರಿ ಮಾಡಿ ಆಯ್ತು. ಆದ್ರೀಗ ಮೂಲ ಬಿಜೆಪಿಗರ ಸಿಟ್ಟು ಕುದಿಯುತ್ತಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಮೂಲ ಬಿಜೆಪಿಗರ ಅಸಮಾಧಾನಕ್ಕೆ ಮುಲಾಮು ಹಚ್ಚಲು ಮುಂದಾಗಿದೆ. ಈ ನಿಟ್ಟಿನಲ್ಲಿ ಮತ್ತೆ ಸಂಪುಟ ವಿಸ್ತರಣೆಯ ಸಂದೇಶ ರವಾನಿಸಿದೆ. ಬಜೆಟ್ ಅಧಿವೇಶನ ಅಂದರೆ ಮಾರ್ಚ್ 5ರೊಳಗೆ ಕೊನೆಯ ಸುತ್ತಿನ ಸಂಪುಟ ವಿಸ್ತರಣೆ ಮಾಡಬಹುದು ಎಂಬ ಸಂದೇಶ ರವಾನಿಸಿದೆ ಎನ್ನಲಾಗಿದೆ.
ಹೈಕಮಾಂಡ್ ಸಂದೇಶ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಚ್ಚರಿ ತಂದಿದೆ. ಖಾಲಿ ಇರುವ ಎಲ್ಲ 6 ಸಚಿವ ಸ್ಥಾನಗಳನ್ನು ಭರ್ತಿ ಮಾಡುವಂತೆ ಹೈಕಮಾಂಡ್ ಸಲಹೆ ನೀಡಿದೆ ಎನ್ನಲಾಗಿದೆ. 2 ದಿನಗಳಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಸಿಎಂ ಯಡಿಯೂರಪ್ಪ ಅವರಿಗೆ ತಿಳಿಸಿದೆ. ಮುಂಬರುವ ಜೂನ್ ತಿಂಗಳಲ್ಲಿ ಸಂಪುಟ ಪುನಾರಚನೆ ಮಾಡುವ ಉದ್ದೇಶ ಬಿಜೆಪಿ ಹೈಕಮಾಂಡ್‍ನದ್ದು. ಜೂನ್ ವೇಳೆ ಕೆಲವರನ್ನು ಕೈಬಿಟ್ಟು ಆರ್.ಶಂಕರ್ ಸೇರಿದಂತೆ ಅರ್ಹರಿಗೆ ಸಚಿವ ಸ್ಥಾನ ನೀಡಲು ಚಿಂತನೆ ನಡೆಸಿದೆ ಎಂಬ ಮಾತು ಕೇಳಿಬರುತ್ತಿವೆ.
ಆದರೆ ಸಿಎಂ ಯಡಿಯೂರಪ್ಪ ಅವರು ಹೈಕಮಾಂಡ್‍ಗೆ ತಮ್ಮ ನಿರ್ಧಾರ ತಿಳಿಸಿಲ್ಲ ಎನ್ನಲಾಗಿದೆ. 6 ಸ್ಥಾನಗಳನ್ನು ತುಂಬಿದರೆ ಉಳಿದ ಐವರಿಗೆ ಸ್ಥಾನಮಾನ ಹೇಗೆ ಅನ್ನೋ ಆತಂಕ ಕೂಡ ಇದೆ. ಮುನಿರತ್ನ, ಪ್ರತಾಪ್‍ಗೌಡ ಪಾಟೀಲ್, ಶಂಕರ್ ಹಾಗೂ ಸೋತಿರುವ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಅವರಿಗೆ ಸ್ಥಾನಮಾನಗಳ ಬಗ್ಗೆ ಲೆಕ್ಕ ಹಾಕ್ತಿದ್ದಾರೆ ಎನ್ನಲಾಗಿದೆ. ಹಾಗಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಯೋಚಿಸಲು ಕಾಲಾವಕಾಶ ಕೇಳಿದ್ದು, ದೆಹಲಿ ಎಲೆಕ್ಷನ್ ಬಳಿಕ ತಮ್ಮ ನಿರ್ಧಾರವನ್ನು ತಿಳಿಸಲು ಮುಂದಾಗಿದ್ದಾರೆ ಎನ್ನುತ್ತಿವೆ ಬಿಜೆಪಿ ಮೂಲಗಳು.