ಪ್ರೀತ್ಸು ಪ್ರೀತ್ಸು ಎಂದು ಹಿಂದೆ ಬಿದ್ದ – ಒಪ್ಪದ್ದಕ್ಕೆ ಆಟೋದಿಂದ ತಳ್ಳಿ ಪೋಷಕರಿಗೆ ಫೋನ್ ಮಾಡ್ದ

Public TV
1 Min Read
CKM copy

ಚಿಕ್ಕಮಗಳೂರು: ಪ್ರೀತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನೇ ಪ್ರಿಯತಮೆಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಸವನಹಳ್ಳಿ ಸಮೀಪ ನಡೆದಿದೆ.

ರಶ್ಮಿ (19) ಮೃತ ದುರ್ದೈವಿ. ರಶ್ಮಿಯನ್ನು ಆಟೋ ಚಾಲಕ ಚೇತನ್ ಆಟೋದಿಂದ ಕೆಳಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

ಏನಿದು ಪ್ರಕರಣ?
ಮೃತ ರಶ್ಮಿ ಮೂಡಿಗೆರೆಯಲ್ಲಿ ದ್ವಿತೀಯ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಳು. ಆದರೆ ಆಟೋ ಚಾಲಕನಾಗಿದ್ದ ಚೇತನ್ ರಶ್ಮಿಯ ಹಿಂದೆ ಬಿದ್ದು ಪ್ರೀತಿಸು ಪ್ರೀತಿಸು ಎಂದು ಕಾಡಿಸುತ್ತಿದ್ದನು. ರಶ್ಮಿ ಆತನ ಹಿಂಸೆಯನ್ನು ತಾಳಲಾಗದೆ ಮನೆಯವರಿಗೆ ತಿಳಿಸಿದ್ದಾಳೆ. ಪೋಷಕರು ಆರು ತಿಂಗಳ ಹಿಂದೆ ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಪೊಲೀಸರು ಕೂಡ ಮತ್ತೆ ಯುವತಿ ಹಿಂದೆ ಹೋಗದಂತೆ ಬುದ್ಧಿವಾದ ಹೇಳಿ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟಿದ್ದರು. ಆದರೂ ಆರೋಪಿ ಚೇತನ್ ಪ್ರತಿದಿನ ಯುವತಿ ಕಾಲೇಜಿಗೆ ಹೋಗುವಾಗ ಬರುವಾಗ ಪ್ರೀತಿಸುವಂತೆ ಪೀಡಿಸುತ್ತಿದ್ದನು.

love 4

ಮಂಗಳವಾರ ಎಂದಿನಂತೆ ರಶ್ಮಿ ಕಾಲೇಜು ಮುಗಿಸಿ ಬರುತ್ತಿದ್ದಾಗ ಬಲವಂತವಾಗಿ ಆಟೋ ಹತ್ತಿಸಿಕೊಂಡಿದ್ದಾನೆ. ಮತ್ತೆ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಕೇಳಿಕೊಂಡಿದ್ದಾನೆ. ಆಗ ರಶ್ಮಿ ಆತನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಇದರಿಂದ ಕೋಪಕೊಂಡ ಆರೋಪಿ ಚೇತನ್ ಬಸವನಹಳ್ಳಿ ಸಮೀಪ ರಶ್ಮಿಯನ್ನು ಆಟೋದಿಂದ ಕೆಳಗೆ ತಳ್ಳಿ ಬೀಳಿಸಿದ್ದಾನೆ. ಕೊನೆಗೆ ಆತನೇ ಆಸ್ಪತ್ರೆಗೆ ಸೇರಿಸಿ ಪೋಷಕರಿಗೆ ಫೋನ್ ಮಾಡಿ, ನಿಮ್ಮ ಮಗಳು ಬಿದ್ದು ಪೆಟ್ಟು ಮಾಡಿಕೊಂಡಿದ್ದಾಳೆ. ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾನೆ.

vlcsnap 2020 02 05 08h34m36s739

ಬಳಿಕ ಆರೋಪಿ ಚೇತನ್ ತನ್ನ ಸಂಬಂಧಿಗೆ ಈ ಬಗ್ಗೆ ತಿಳಿಸಿ ಬೇಲೂರಿನ ಆಸ್ಪತ್ರೆಗೆ ಸೇರಿಸಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಶ್ಮಿ ಮೃತಪಟ್ಟಿದ್ದಾಳೆ. ನನ್ನ ಮಗಳು ಆತನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಆಟೋದಿಂದ ಕೆಳಗೆ ತಳ್ಳಿ ಕೊಲೆ ಮಾಡಿದ್ದಾನೆ. ಆತನಿಗೆ ಕಠಿಣ ಶಿಕ್ಷೆಯಾಗಬೇಕೆಂದು ದೂರಿನಲ್ಲಿ ಪೋಷಕರು ಪೊಲೀಸರಿಗೆ ಘಟನೆಯ ವಿವರ ನೀಡಿದ್ದಾರೆ.

ಈ ಕುರಿತು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಚೇತನ್‍ನನ್ನು ಪೊಲೀಸರು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *