ಬೆಂಗಳೂರು: ಸಂಜಯನಗರದ ನಾಗಶೆಟ್ಟಿ ಸರ್ಕಲ್‍ನಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಾಣ ಮಾಡಲು ಬಿಡದೇ ರಾತ್ರೋ ರಾತ್ರಿ ಬಸವಣ್ಣನವರ ಪ್ರತಿಮೆಯನ್ನ ಕೂರಿಸಿದ ಆರೋಪ ಬಿಜೆಪಿ ನಾಯಕಿ ಹಾಗೂ ರಾಧಾಕೃಷ್ಣ ಪಬ್ಲಿಕ್ ಸ್ಕೂಲ್‍ನ ಅಧ್ಯಕ್ಷೆ ಸುನಿತಾ ಮಂಜುನಾಥ್ ಮೇಲೆ ಕೇಳಿಬಂದಿದೆ.
ರಾತ್ರೋ ರಾತ್ರಿ ಬಸವಣ್ಣನ ಪ್ರತಿಮೆ ನಿರ್ಮಾಣ ಮಾಡಿರೋದನ್ನ ವಿರೋಧಿಸಿ ಅಂಬೇಡ್ಕರ್ ಕಾಲೋನಿಯ ನಿವಾಸಿಗಳು ನಾಗಶೆಟ್ಟಿ ಸರ್ಕಲ್ ಬಳಿ ಅಂಬೇಡ್ಕರ್ ಫೋಟೋ ಹಿಡಿದುಕೊಂಡು ಪ್ರತಿಭಟಿಸಿದರು. ವಾರ್ಡ್ ನಂಬರ್ 18ರ ವ್ಯಾಪ್ತಿಯಲ್ಲಿ ಬರುವ ಈ ಸರ್ಕಲ್‍ನಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಹಲವು ಬಾರಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕ ಬೈರತಿ ಸುರೇಶ್ ಹಾಗೂ ಸ್ಥಳೀಯ ಕಾರ್ಪೋರೇಟರ್ ಗಳಿಗೆ ಇಲ್ಲಿನ ಅಂಬೇಡ್ಕರ್ ಕಾಲೋನಿ ನಿವಾಸಿಗಳು ಮನವಿ ಮಾಡಿಕೊಂಡಿದ್ದರು.
ಈ ವೇಳೆ ಪ್ರತಿಮೆ ನಿರ್ಮಾಣಕ್ಕೆ ಅನುಮತಿ ಕೂಡ ನೀಡಿದ್ದರು. ಅಷ್ಟು ಮಾತ್ರವಲ್ಲ ಡಿಸಿಎಂ ಅಶ್ವಥ್ ನಾರಾಯಣ ಕೂಡ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡೋದಕ್ಕೆ ಒಪ್ಪಿಗೆ ಸೂಚಿಸಿದ್ದರು. ಇನ್ನೇನು ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಆಗುತ್ತೆ ಅನ್ನೋದನ್ನ ತಿಳಿದು, ರಾತ್ರೋ ರಾತ್ರಿ ಬಸವಣ್ಣನವರ ಪ್ರತಿಮೆಯನ್ನು ಶ್ರೀ ಚನ್ನಕೇಶವ ಎಜ್ಯುಕೇಶನ್ ಟ್ರಸ್ಟ್ ನವರು ನಿರ್ಮಾಣ ಮಾಡಿದ್ದಾರೆ ಅಂತ ಸ್ಥಳೀಯರು ಹಾಗೂ ಭಾರತೀಯ ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕೋದಂಡ ರಾಮ ದೂರಿದ್ದಾರೆ.
ಪ್ರತಿಭಟನೆಯ ಸ್ವರೂಪ ಹೆಚ್ಚಾಗ್ತಿದ್ದಂತೆ ನಾಗಶೆಟ್ಟಿ ಸರ್ಕಲ್ ಬಳಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ಸಂಜಯ್ ನಗರ ಪೊಲೀಸರು ಪ್ರತಿಭಟನೆಯನ್ನ ಮಾಡಬೇಡಿ. ಮಧ್ಯರಾತ್ರಿ ಪ್ರತಿಮೆಯನ್ನು ತಂದು ಕೂರಿಸೋದಕ್ಕೆ ಯಾರು ಅವಕಾಶ ಕೊಟ್ರು ಅನ್ನೋದನ್ನ ಪರಿಶೀಲಿಸೋಣ, ಪ್ರತಿಭಟನೆಯನ್ನ ಹಿಂಪಡೆಯಿರಿ ಎಂದು ಮನವೊಲಿಸಿದ್ರು. ಪ್ರತಿಭಟನಾ ಸ್ಥಳಕ್ಕೆ ಬಂದ ಸ್ಥಳೀಯ ಕಾರ್ಪೋರೇಟರ್ ಆನಂದ್ ಕೂಡ ಬಸವಣ್ಣನ ಪ್ರತಿಮೆ ನಿರ್ಮಾಣ ಮಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.