ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್‍ನಲ್ಲಿ ಸಂಭವಿಸಿದ ಜ್ವಾಲಾಮುಖಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಮೂಲದ ಅಮೆರಿಕ ದಂಪತಿ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಜೋಡಿಯ ಮೂವರು ಮಕ್ಕಳು ಅನಾಥರಾಗಿದ್ದಾರೆ.
ಪ್ರತಾಪ್ ಸಿಂಗ್ ಹಾಗೂ ಮಯೂರಿ ಸಿಂಗ್ ಮೃತಪಟ್ಟ ದಂಪತಿ. ಪ್ರತಾಪ್ ಹಾಗೂ ಮಯೂರಿ ಡಿ. 9ರಂದು ರಜೆ ದಿನಗಳನ್ನು ಕಳೆಯಲು ನ್ಯೂಜಿಲೆಂಡ್‍ನ ವೈಟ್ ಐಲ್ಯಾಂಡ್‍ಗೆ ತೆರೆಳಿದ್ದರು. ಈ ವೇಳೆ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಮಯೂರಿ ಹಾಗೂ ಪ್ರತಾಪ್ ಗಂಭೀರವಾಗಿ ಗಾಯಗೊಂಡಿದ್ದರು. ಮಯೂರಿ ಡಿ. 22ರಂದು ಮೃತಪಟ್ಟರೆ, ಪ್ರತಾಪ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈಗ ಪ್ರತಾಪ್ ಅವರು ಕೂಡ ಆಕ್ಲೆಂಡ್ ನಲ್ಲಿರುವ ಮಿಡಿಲ್‍ಮೋರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪ್ರತಾಪ್ ಅವರ ಸಾವಿನ ನಂತರ ಜ್ವಾಲಾಮುಖಿಯಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿದೆ. ಮಯೂರಿ ಮೃತಪಟ್ಟ ಆಸ್ಪತ್ರೆಯಲ್ಲೇ ಪ್ರತಾಪ್ ಕೂಡ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಪ್ರತಾಪ್ ಅವರ ದೇಹ ಅರ್ಧದಷ್ಟು ಸುಟ್ಟು ಹೋಗಿದೆ. ಜ್ವಾಲಾಮುಖಿ ಸ್ಫೋಟಿಸಿದಾಗ ಅಲ್ಲಿ 47 ಮಂದಿ ಇದ್ದು, ಅದರಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಇನ್ನು ಹಲವು ಮಂದಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಮೃತಪಟ್ಟಿದ್ದಾರೆ.
ಈ ಜೋಡಿಯ 11 ವರ್ಷ ಮಗ ಹಾಗೂ 6 ವರ್ಷದ ಅವಳಿ ಹೆಣ್ಣು ಮಕ್ಕಳು ರಾಯಲ್ ಕೆರಿಬಿಯನ್ ಕ್ರೂಸ್ ಶಿಪ್‍ನಲ್ಲಿ ಸಂಚರಿಸುವ ಮೂಲಕ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಈಗ ತಂದೆ-ತಾಯಿ ಇಬ್ಬರು ಮೃತಪಟ್ಟಿದ್ದು, ಮಕ್ಕಳು ಅನಾಥರಾಗಿದ್ದಾರೆ.