ಕೆಲ ಸಿನಿಮಾಗಳು ಪ್ರೇಕ್ಷಕರ ವಲಯದಲ್ಲಿ ಗುರುತುಳಿಸಿಕೊಳ್ಳುವುದಕ್ಕೆ ಯಾವುದೇ ಪ್ರಚಾರದ ಪಡಿಪಾಟಲುಗಳೂ ಬೇಕಾಗುವುದಿಲ್ಲ. ಅವುಗಳ ಶೀರ್ಷಿಕೆಯೇ ಆ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಿ ಬಿಡುತ್ತವೆ. ಈ ವಾರ ಬಿಡುಗಡೆಗೊಳ್ಳಲಿರುವ ಪುಟ್ಟರಾಜ ಸ್ವಾಮಿ ನಿರ್ದೇಶನದ ‘ನಮೋ’ ಚಿತ್ರ ಕೂಡಾ ಅಂಥಾ ಸಿನಿಮಾಗಳ ಯಾದಿಗೆ ಸೇರಿಕೊಳ್ಳುವಂಥಾದ್ದು. ಈ ಚಿತ್ರದ ಟೈಟಲ್ ಅನೌನ್ಸ್ ಆದ ಕ್ಷಣದಿಂದಲೇ ತಾನೇ ತಾನಾಗಿ ಪ್ರಚಾರ ಪರ್ವ ಶುರುವಾಗಿತ್ತು. ಅದಕ್ಕೆ ಕಾರಣವಾಗಿರೋದು ನಮೋ ಎಂಬ ನಾಮಧೇಯ!
ನಮೋ ಎಂಬ ಹೆಸರು ಕೇಳಿದಾಕ್ಷಣವೇ ಅಪ್ರಯತ್ನಪೂರ್ವಕವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೆನಪಾಗುತ್ತಾರೆ. ಅಷ್ಟಕ್ಕೂ ಜನಪ್ರಿಯ ನಾಯಕರಾಗಿ ಹಿಒರ ಹೊಮ್ಮಿರುವ ಮೋದಿ ಜೀವನಾಧಾರಿತ ಚಿತ್ರಗಳ ಬಗ್ಗೆ ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ಮಾತುಗಳು ಕೇಳಿ ಬರುತ್ತಲೇ ಇವೆ. ನಮೋ ಎಂಬ ಟೈಟಲ್ ಅನೌನ್ಸ್ ಆದಾಕ್ಷಣವೇ ಇದು ನರೇಂದ್ರ ಮೋದಿಯವರ ಬಯೋಪಿಕ್ ಇರಬಹುದಾ ಎಂಬ ಕುತೂಹಲ ಎಲ್ಲರನ್ನೂ ಕಾಡಿತ್ತು. ಅದನ್ನೇ ಈ ಸಿನಿಮಾದೆಡೆಗಿನ ಪ್ರಧಾನ ಆಕರ್ಷಣೆಯಾಗಿ ಮಾರ್ಪಾಟು ಮಾಡಿಕೊಳ್ಳುವಲ್ಲಿ ಚಿತ್ರತಂಡ ಅಮೋಘ ಗೆಲುವನ್ನೇ ದಾಖಲಿಸಿ ಬಿಟ್ಟಿದೆ.
ನಮೋ ಅಂದರೆ ಈಗ ನರೇಂದ್ರ ಮೋದಿ ಎಂಬಂಥಾ ವಾತಾವರಣವಿದ್ದರೂ ಅದಕ್ಕೆ ಕತ್ತಲಿಂದ ಬೆಳಕಿನೆಡೆಗೆ ಸಾಗುವಂಥಾ ಅಮೋಘ ಅರ್ಥವೂ ಇದೆ. ಇಲ್ಲಿನ ಕಥೆಯ ಪಥ ಅದೇ ದಿಕ್ಕಿನತ್ತ ಸಾಗುತ್ತದೆಯಂತೆ. ಹಾಗಾದರೆ ಈ ಸಿನಿಮಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೂ ಯಾವ ಸಂಬಂಧವೂ ಇಲ್ಲವೇ ಎಂಬ ಪ್ರಶ್ನೆ ಮುಂದಿಟ್ಟರೆ ಚಿತ್ರ ತಂಡ ಮತ್ತದೇ ಜಾಣ್ಮೆಯನ್ನು ಪ್ರದರ್ಶಿಸುತ್ತದೆ. ಅದಕ್ಕೆ ಸಿನಿಮಾ ಬಿಡುಗಡೆಯಾದ ನಂತರವಷ್ಟೇ ಉತ್ತರ ಸಿಗಲಿದೆ ಎಂಬ ಮಾತೂ ಕೂಡಾ ಚಿತ್ರ ತಂಡದ ಕಡೆಯಿಂದ ತೂರಿ ಬರುತ್ತದೆ. ಅಂದಹಾಗೆ ಸಿನಿಮಾವನ್ನು ನಿರ್ದೇಶನ ಮಾಡಿರುವ ಪುಟ್ಟರಾಜಸ್ವಾಮಿ ಅವರೇ ನಾಯಕನಾಗಿಯೂ ನಟಿಸಿದ್ದಾರೆ. ಈ ಸಿನಿಮಾ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.