ಮಂಗಳೂರು: ಕರೆಂಟ್ ಬಿಲ್ ಕೇಳಲು ಬಂದ ಮೆಸ್ಕಾಂ ಸಿಬ್ಬಂದಿ ಮೇಲೆ ಕಾಂಗ್ರೆಸ್ ಮುಖಂಡ ಹಾಗೂ ತಮ್ಮ ಆಪ್ತ ಅಮೀರ್ ಹಸನ್ ತುಂಬೆ ಹಲ್ಲೆನಡೆಸಿರುವ ಬಗ್ಗೆ ಮಾಜಿ ಸಚಿವ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ. ನನ್ನ ಕುಟುಂಬಸ್ಥರೇ ಆಗಲಿ, ಆಪ್ತರೇ ಆಗಲಿ ತಪ್ಪು ಮಾಡಿದವರ ಪರ ನಾನು ಯಾವತ್ತೂ ನಿಲ್ಲಲ್ಲ ಎಂದು ಖಾದರ್ ಹೇಳಿದ್ದಾರೆ.
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಖಾದರ್ ಅವರು, ನನ್ನ ಕ್ಷೇತ್ರದಲ್ಲಿ ಎಲ್ಲರೂ ನನಗೆ ಆಪ್ತರು. ಅವರು ಕಾಂಗ್ರೆಸ್ಸಿನವರಾಗಲಿ, ಪತಿಪಕ್ಷದವರಾಗಲಿ ಎಲ್ಲರೂ ನನಗೆ ಆಪ್ತರು. ನನ್ನ ಕುಟುಂಬಸ್ಥರು, ಸ್ನೇಹಿತರು, ಆಪ್ತರು ಯಾರೇ ತಪ್ಪು ಮಾಡಿದರು ನಾನು ಅವರ ಪರ ನಿಲ್ಲುವವರಲ್ಲ, ನಿಂತೂ ಇಲ್ಲ, ಮುಂದೆ ಕೂಡ ನಿಲ್ಲೋದಿಲ್ಲ ಎಂದು ಸ್ಪಷ್ಟಪಡಿಸಿದರು.
ತಪ್ಪು ಮಾಡಿದವರ ಮೇಲೆ ಪೊಲೀಸರು ಕಾನೂನು ರೀತಿ ಕ್ರಮ ತೆಗೆದುಕೊಳ್ಳಬಹುದು. ನಾನು ಯಾರ ಪರವಾಗಿಯೂ ಹೋಗಲ್ಲ. ನಾವು ಸಾರ್ವಜನಿಕರ ಸಂಪರ್ಕದಲ್ಲಿರುತ್ತೇವೆ, ಹೀಗಾಗಿ ಎಲ್ಲರೂ ನಮಗೆ ಪರಿಚಯಸ್ಥರು. ಆದ್ರೆ ಹೀಗೆ ಹಲ್ಲೆ ಮಾಡಿದ ಬಗ್ಗೆ ತಿಳಿದು ನನಗೆ ಆಶ್ಚರ್ಯವಾಗಿದೆ. ನನಗೆ ತಿಳಿದಿರುವ ಪ್ರಕಾರ, ಅಮೀರ್ ಬಡವರಿಗೆ, ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡೋನು. ಇಲ್ಲಿಯವರೆಗೂ ಅವನು ಎಲ್ಲಾ ಜಾತಿ, ಧರ್ಮದವರ ಜೊತೆ ಚೆನ್ನಾಗಿದ್ದಾನೆ, ಭೇದಭಾವ ಮಾಡಿಲ್ಲ. ಆದ್ರೆ ಈಗ ಯಾಕೆ ಈ ರೀತಿ ಮಾತನಾಡಿದ್ದಾನೆ ಎಂದು ಸ್ವತಃ ನನಗೇ ಅಚ್ಚರಿಯಾಗುತ್ತಿದೆ ಎಂದರು.
ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ಪೊಲೀಸರಿಗೆ ಇದೆ. ನ್ಯಾಯ ಕೇಳುವಂತ ಹಕ್ಕು ನೋವು ಪಟ್ಟವರಿಗಿದೆ. ಸರ್ಕಾರಿ ಸಿಬ್ಬಂದಿ ನಮ್ಮ ವೈರಿಗಳಲ್ಲ. ಯಾರೂ ಕೂಡ ಈ ರೀತಿ ಮಾಡಬಾರದು ಎಂದು ಖಾದರ್ ಕಿವಿ ಮಾತು ಹೇಳಿದರು.
ಏನಿದು ಪ್ರಕರಣ?
ಮಂಗಳೂರು ಹೊರವಲಯದ ದೇರಳಕಟ್ಟೆ ಬಳಿ ಅಮೀರ್ ತುಂಬೆ ಮನೆಯಿದ್ದು, ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದ್ದಕ್ಕೆ ಹಾಗೂ ಮೀಟರ್ ನಲ್ಲೂ ಗೋಲ್ ಮಾಲ್ ನಡೆಸಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಮೀಟರ್ ಪರಿಶೀಲಿಸಲು ಮೆಸ್ಕಾಂ ಲೈನ್ ಮ್ಯಾನ್ ಅಮೀರ್ ಮನೆಗೆ ಬಂದಿದ್ದರು. ಅಲ್ಲದೆ ಬಿಲ್ ಬಾಕಿ ಉಳಿಸಿಕೊಂಡಿದ್ದ ಕಾರಣಕ್ಕೆ ಫ್ಯೂಸ್ ತೆಗೆಯಲು ಮುಂದಾಗಿದ್ದರು. ಇದರಿಂದ ರೊಚ್ಚಿಗೆದ್ದ ಅಮೀರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಮೆಸ್ಕಾಂ ಸಿಬ್ಬಂದಿ ರಂಗನಾಥ್ ಮುಖಕ್ಕೆ ಉಗುಳಿದ್ದು, ಸಂದೇಶ್ ಕುಮಾರ್ ಹಾಗೂ ಮಧುನಾಯ್ಕ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ.
ಮನೆಗೆ ಬಂದಿದ್ದ ಮೂರು ಸಿಬ್ಬಂದಿಗೂ ಕುತ್ತಿಗೆ ಹಿಡಿದು ಹೊರಕ್ಕೆ ದೂಡಿದ್ದಾನೆ. ಕಾಂಗ್ರೆಸ್ ಮುಖಂಡನ ರೌಡಿಸಂ ಬಗ್ಗೆ ಹಲ್ಲೆಗೊಳಗಾದ ಸಿಬ್ಬಂದಿ ಮಧು ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಜಾಮೀನು ರಹಿತ ಎಫ್‍ಐಆರ್ ದಾಖಲಾಗಿದೆ. ಸಚಿವರ ಆಪ್ತನೆಂಬ ಕಾರಣಕ್ಕೆ ಅಮೀರ್ ರೌಡಿಸಂ ತೋರಿದ್ದಾನೆ ಎನ್ನಲಾಗುತ್ತಿದ್ದು, ಅಮೀರ್ ತುಂಬೆ ಹಲ್ಲೆ ಮಾಡಿದ ದೃಶ್ಯವನ್ನು ಹಲ್ಲೆಗೊಳಗಾದ ಮೆಸ್ಕಾಂ ಸಿಬ್ಬಂದಿ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.