ಬೆಂಗಳೂರು: ನಮ್ಮ ಬೇಡಿಕೆಗಳಿಗೆ ಸ್ಪಂದಿಸದ ಸರ್ಕಾರ ಇದ್ದು ಸತ್ತಂತೆ ಎಂದು ಸರ್ಕಾರದ ವಿರುದ್ಧ ಸಾರಿಗೆ ನೌಕರರು ತಮ್ಮ ಆಕ್ರೋಶವನ್ನ ಹೊರ ಹಾಕಿದ್ದಾರೆ.
ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು, ಸರ್ಕಾರಿ ಸೌಲಭ್ಯಗಳನ್ನ ಕಲ್ಪಿಸಬೇಕು ಅಂತ ಇವತ್ತು ಸಾರಿಗೆ ನೌಕರರು ರೋಡಿಗಿಳಿದು ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಪ್ರತಿಭಟನೆಯನ್ನ ನಡೆಸಿದರು. ನಗರದ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಸಾರಿಗೆ ನೌಕರರು ಸರ್ಕಾರದ ಧೋರಣೆಯನ್ನು ಖಂಡಿಸಿದರು.
ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ದೀರ್ಘಕಾಲ ಉಪವಾಸ ಮಾಡುತ್ತೇವೆ. ಮುಂದಿನ ಹೋರಾಟದ ಸ್ವರೂಪ ತುಂಬಾ ಗಂಭೀರವಾಗಿರುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು. ಉಪವಾಸ ಇದ್ದು ನಾವು ಸಾಯುತ್ತೇವೆ. 1 ಲಕ್ಷ 25 ಸಾವಿರ ಸಾರಿಗೆ ನೌಕರರು ಸತ್ತರೆ ಸರ್ಕಾರ ಎಚ್ಚೆತ್ತು, ಉಳಿದವರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲಿ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.
ಸಾರಿಗೆ ನೌಕರರ ಪ್ರತಿಭಟನೆಗೆ ವಿವಿಧ ಮಠದ ಮಠಾಧೀಶರು ಕೂಡ ಬೆಂಬಲ ಸೂಚಿಸಿದರು. ಸಾರಿಗೆ ನೌಕರರು ಶಿಫ್ಟ್ ಗಳನ್ನ ಹೊಂದಿಸಿಕೊಂಡು, ಯಾರು ಕರ್ತವ್ಯಕ್ಕೆ ಗೈರಾಗದೆ ಪ್ರತಿಭಟನೆ ನಡೆಸಿದ ಹಿನ್ನೆಲೆ, ಸಂಚಾರ ವ್ಯವಸ್ಥೆ ವ್ಯತಯವಾಗಲಿಲ್ಲ.