ಮೈಸೂರು : ಫ್ರೀ ಕಾಶ್ಮೀರ ಫಲಕ ಪ್ರದರ್ಶನ ಮಾಡಿದ್ದ ಯುವತಿ ನಳಿನಿ ಬಾಲಕುಮಾರ್ ಗೆ ಮೈಸೂರು ಎರಡನೇ ಅಡಿಷನಲ್ ಜಿಲ್ಲಾ ಸೆಷನ್ಸ್ ನ್ಯಾಯಲಯ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ. ಪ್ರಕರಣದ ಮತ್ತೋರ್ವ ಆರೋಪಿ ಮರಿದೇವಯ್ಯನಿಗೂ ನ್ಯಾಯಾಲಯ ಜಾಮೀನು ನೀಡಿದೆ.
ಇಬ್ಬರು ತಲಾ 50 ಸಾವಿರ ಬಾಂಡ್ ಜೊತೆ ಒಬ್ಬರು ಶ್ಯೂರಿಟಿ ನೀಡಬೇಕು. ಒಂದು ತಿಂಗಳ ಒಳಗೆ ಪಾಸ್‍ಪೋರ್ಟ್ ನ್ನು ಪೊಲೀಸರ ವಶಕ್ಕೆ ನೀಡುವುದು. 15 ದಿನಕ್ಕೊಮ್ಮೆ ಪೊಲೀಸ್ ಠಾಣೆಗೆ ಬೆಳಗ್ಗೆ 10 ಗಂಟೆಯಿಂದ 12 ಗಂಟೆಯೊಳಗೆ ಭೇಟಿ ನೀಡಿ ಸಹಿ ಮಾಡಬೇಕು ಎಂದು ಷರತ್ತನ್ನು ನ್ಯಾಯಾಲಯ ವಿಧಿಸಿದೆ.
ಮೈಸೂರು ವಿವಿಯ ಕ್ಯಾಂಪಸ್ ನಲ್ಲಿ ನಡೆದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ ಪ್ರಕರಣದಲ್ಲಿ ಆರೋಪಿ ನಳಿನಿ ಜಾಮೀನು ಕುರಿತು ಜ.24ರಂದು ಸುದೀರ್ಘ ವಾದ, ಪ್ರತಿವಾದ ನಡೆದಿತ್ತು. ನ್ಯಾಯಾಧೀಶರು ಜ.27ಕ್ಕೆ ತೀರ್ಪು ಕಾಯ್ದಿರಿಸಿದರು. ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಲಯದಲ್ಲಿ ಈ ವಾದ – ಪ್ರತಿವಾದ ನಡೆದಿತ್ತು. ನಳಿನಿ ಪರ ಐವರು ವಕೀಲರು ವಾದ ಮಂಡಿಸಿದ್ದರು.