ಸ್ಕೇಟಿಂಗ್ ಚಾಂಪಿಯನ್ ಅನಘಾಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Public TV
1 Min Read
MNG ANAGHA

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡುವ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಕ್ರೀಡಾ ವಿಭಾಗದಿಂದ ಮಂಗಳೂರಿನ ಸ್ಕೇಟಿಂಗ್ ಪಟು ಅನಘಾ ಆಯ್ಕೆಯಾಗಿದ್ದಾರೆ.

ತನ್ನ ನಾಲ್ಕನೇ ವಯಸ್ಸಿನಲ್ಲಿ ಸ್ಕೇಟಿಂಗ್ ಕ್ರೀಡೆಯನ್ನು ಆರಂಭಿಸಿದ 9 ವರ್ಷ ವಯಸ್ಸಿನ ಅನಘಾ ಕಳೆದ 2020 ಜನವರಿ 4 ಹಾಗೂ 5 ರಂದು ಸಿಂಗಾಪುರದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಐಸ್ ಸ್ಕೇಟಿಂಗ್ ನಲ್ಲಿ ಎರಡು ಚಿನ್ನದ ಪದಕ ಪಡೆದು ಅತೀ ಕಿರಿಯ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಚಿನ್ನದ ಪದಕ ಪಡೆದ ದೇಶದ ಮೊದಲ ಸ್ಕೇಟರ್ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

anagha 3

ಅನಘಾ ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಈವರೆಗೆ ಒಟ್ಟು 22 ಚಿನ್ನದ ಪದಕ, 9 ಬೆಳ್ಳಿ ಹಾಗೂ 6 ಕಂಚಿನ ಪದಕ ಪಡೆದಿದ್ದಾರೆ. ಮಂಗಳೂರಿನ ಕದ್ರಿ ಹಿಲ್ಸ್ ನಿವಾಸಿ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ ಬಿಜೈ ಸೆಂಟ್ರಲ್ ಸ್ಕೂಲ್ ನಾಲ್ಕನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಕಳೆದ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ನೀತಿ ಸಂಹಿತೆಯ ಹಿನ್ನಲೆಯಲ್ಲಿ ಪ್ರಶಸ್ತಿ ನೀಡಲಿಲ್ಲ. ಹೀಗಾಗಿ 2019-20ರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಜಿಲ್ಲಾಡಳಿತ ನಾಳೆ ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಿದೆ.

Share This Article
Leave a Comment

Leave a Reply

Your email address will not be published. Required fields are marked *