– ಔರಾದ್‍ನ ಶಿಕ್ಷಕ ವೀರಕುಮಾರ್ ಇವತ್ತಿನ ಪಬ್ಲಿಕ್ ಹೀರೋ
ಬೀದರ್: ದೇಶಾದ್ಯಂತ ಏಕ ಬಳಕೆಯ (ಸಿಂಗಲ್ ಯೂಸ್) ಪ್ಲಾಸ್ಟಿಕ್ ನಿಷೇಧಕ್ಕೆ ಜಾಗೃತಿ ನಡೆಯುತ್ತಿದೆ. ಕೆಲವು ಕಡೆ ಜಾರಿಯೂ ಆಗುತ್ತಿದೆ. ಇದಕ್ಕೆ ಕೈಜೋಡಿಸಿರೋ ನಮ್ಮ ಇವತ್ತಿನ ಪಬ್ಲಿಕ್ ಹೀರೋ ಔರಾದ್‍ನ ಠಾಣಾಕುಸನೂರು ಗ್ರಾಮದ ಶಿಕ್ಷಕ ವೀರಕುಮಾರ್. ಪ್ಲಾಸ್ಟಿಕ್ ಬಳಕೆಯ ಕುರಿತು ಶಾಲೆಯಿಂದಲೇ ಮಕ್ಕಳಿಗೆ ಅರಿವು ಮೂಡಿಸುತ್ತಿದ್ದು, ಇದರಲ್ಲಿ ಯಶಸ್ವಿಯೂ ಆಗಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಠಾಣಾಕುಸನೂರು ಗ್ರಾಮದಲ್ಲಿರುವ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ನ ಆಂಗ್ಲ ಮಾದ್ಯಮ ಶಿಕ್ಷಕರಾದ ವೀರಕುಮಾರ್ ಮಂಠಾಳಕರ್ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದ್ದಾರೆ. 7ನೇಯ ತರಗತಿ ಪಠ್ಯದಲ್ಲಿರುವ “ಅವೈಂಡ್ ಪ್ಲಾಸ್ಟಿಕ್” ಎಂಬ ಪಾಠದಿಂದ ಪ್ರೇರಣೆ ಪಡೆದ ಶಿಕ್ಷಕರು, 400 ವಿದ್ಯಾರ್ಥಿಗಳ ಮೇಲೆ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.
ಪ್ರತಿದಿನ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾದ್ರೂ, ತರಕಾರಿ, ಹಣ್ಣ ಹಂಪಲು ತರಲು ತಾವೇ ಕೈಯಾರ ಮಾಡಿಕೊಂಡಿರುವ ಬಟ್ಟೆ ಚೀಲವನ್ನೆ ಬಳಕೆ ಮಾಡುತ್ತಿದ್ದಾರೆ. 1 ರಿಂದ 7 ತರಗತಿವರೆಗೆ ಈ ಯೋಜನೆ ಅನುಷ್ಠಾನ ಮಾಡಿ ಯಶಸ್ವಿಯಾಗಿರೋ ಮೇಷ್ಟ್ರು ವೀರಕುಮಾರ್, ಈಗ ಗ್ರಾಮದಲ್ಲೂ ಆಂದೋಲನಕ್ಕೆ ಮುಂದಾಗಿದ್ದಾರೆ. 100 ಗ್ರಾಮಸ್ಥರಿಗೆ ಮಕ್ಕಳೇ ತಯಾರು ಮಾಡಿರೋ ಬಟ್ಟೆ ಚೀಲವನ್ನು ಉಚಿತವಾಗಿ ನೀಡಿದ್ದಾರೆ.
ಪ್ಲಾಸ್ಟಿಕ್ ವಾಟರ್ ಬಾಟೆಲ್, ಪ್ಲಾಸ್ಟಿಕ್ ಕವರ್‍ನಲ್ಲಿರೋ ಸ್ನ್ಯಾಕ್ಸ್ ತಿನ್ನದಂತೆ ಮಕ್ಕಳಿಗೆ ಮೇಷ್ಟ್ರು ಸೂಚಿಸಿದ್ದು, ಇದು ಕಾರ್ಯಗತವೂ ಆಗುತ್ತಿದೆ. ಈ ಸ್ಟೋರಿಯನ್ನು ನೋಡೋ ಶಿಕ್ಷಕರೂ ಕೂಡ ತಮ್ಮ ಶಾಲೆಗಳಲ್ಲಿ ಅನುಷ್ಠಾನ ತಂದರೆ ಪ್ಲಾಸ್ಟಿಕ್ ಮುಕ್ತ ಜಾಗೃತಿ ಮತ್ತಷ್ಟು ಪರಿಣಾಮಕಾರಿಯಾಗಲಿದೆ.