ಬೆಂಗಳೂರು : ಕರ್ನಾಟಕದ ವಿವಿಧ ಭಾಗಗಳಲ್ಲಿ 1,004 ಕೋಟಿ ರೂ. ಮೊತ್ತದ 41 ಬೃಹತ್ ಸೇತುವೆಗಳ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದ್ದು, ನಿಗದಿತ ಅವಧಿಯೊಳಗೆ ಸೇತುವೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ. ಕಾರಜೋಳ ಸೂಚಿಸಿದರು.
ಬೆಂಗಳೂರಿನಲ್ಲಿಂದು ನಡೆದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಮಗದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ಯಾಕೇಜ್ 1ರಲ್ಲಿ ಒಟ್ಟು 189 ಕೋಟಿ ರೂ. ಮೊತ್ತದಲ್ಲಿ ಕಲಬುರಗಿ ಜಿಲ್ಲೆಯಲ್ಲಿ 4 ಸೇತುವೆ, ವಿಜಯಪುರ ಜಿಲ್ಲೆಯಲ್ಲಿ 1, ಬಾಗಲಕೋಟೆ ಜಿಲ್ಲೆಯಲ್ಲಿ 2 ಸೇತುವೆಗಳ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದೆ. ಕಾಮಗಾರಿ ಅವಧಿಯು 24 ರಿಂದ 36 ತಿಂಗಳಾಗಿದ್ದು, ಈಗಾಗಲೇ ಶೇ. 12 ರಷ್ಟು ಪ್ರಮಾಣದಲ್ಲಿ ಪೂರ್ಣಗೊಂಡಿದೆ.
ಪ್ಯಾಕೇಜ್ 2ರಲ್ಲಿ 197 ಕೋಟಿ ರೂ. ಮೊತ್ತದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 8 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೇ. 7ರಷ್ಟು ಪ್ರಮಾಣದಲ್ಲಿ ಕಾಮಗಾರಿ ಪೂರ್ಣಗೊಂಡಿವೆ. ಪ್ಯಾಕೇಜ್ 3 ರಲ್ಲಿ 249 ಕೋಟಿ ರೂ. ಮೊತ್ತದಲ್ಲಿ ಧಾರವಾಡ ಜಿಲ್ಲೆಯಲ್ಲಿ 2, ಹಾವೇರಿ ಜಿಲ್ಲೆಯಲ್ಲಿ 2, ಶಿವಮೊಗ್ಗ ಜಿಲ್ಲೆಯಲ್ಲಿ 5, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ಹಾಗೂ ಉಡುಪಿ ಜಿಲ್ಲೆಯಲ್ಲಿ 1 ಕಾಮಗಾರಿಯು ಪ್ರಗತಿಯಲ್ಲಿದ್ದು, ಕಾಮಗಾರಿಯ ಅವಧಿಯು 18 ರಿಂದ 48 ತಿಂಗಳಾಗಿದ್ದು, ಶೇ. 25 ರಷ್ಟು ಕಾಮಗಾರಿಯು ಪೂರ್ಣಗೊಂಡಿದೆ.
ಪ್ಯಾಕೇಜ್ 4 ರಲ್ಲಿ 189 ಕೋಟಿ ರೂ. ಮೊತ್ತದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 7 ಸೇತುವೆಗಳು ಪ್ರಗತಿ ಹಂತದಲ್ಲಿದ್ದು, ಕಾಮಗಾರಿಯ ಅವಧಿಯು 15 ರಿಂದ 30 ತಿಂಗಳಾಗಿದ್ದು, ಶೇ. 30 ರಷ್ಟು ಕಾಮಗಾರಿಯು ಪೂರ್ಣಗೊಂಡಿದೆ. ಪ್ಯಾಕೇಜ್ 5 ರಲ್ಲಿ ಒಟ್ಟು 177 ಕೋಟಿ ರೂ. ಮೊತ್ತದಲ್ಲಿ ಹಾಸನ ಜಿಲ್ಲೆಯಲ್ಲಿ 3, ಚಿಕ್ಕಮಗಳೂರು ಜಿಲ್ಲೆಯಲ್ಲಿ 3, ಮಂಡ್ಯ ಜಿಲ್ಲೆಯಲ್ಲಿ 2 ಹಾಗೂ ಬೆಂಗಳೂರು ಜಿಲ್ಲೆಯಲ್ಲಿ 1 ಬೃಹತ್ ಸೇತುವೆಗಳು ಪ್ರಗತಿಯಲ್ಲಿದ್ದು, ಶೇ. 22 ರಷ್ಟು ಪ್ರಮಾಣದಲ್ಲಿ ಪೂರ್ಣಗೊಂಡಿವೆ ಎಂದು ಅವರು ತಿಳಿಸಿದರು.
175 ಕಿರು ಸೇತುವೆಗಳ ಕಾಮಗಾರಿಯು ಪ್ರಗತಿಯಲ್ಲಿದ್ದು, ಅದರಲ್ಲಿ 15 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ. ಮಾರ್ಚ್ ಅಂತ್ಯದೊಳಗೆ 98 ಸೇತುವೆಗಳ ಕಾಮಗಾರಿಯು ಪೂರ್ಣಗೊಳ್ಳಲಿದೆ. ಉಳಿದ ಕಾಮಗಾರಿಗಳ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿವೆ. ಟೆಂಡರ್ ನಲ್ಲಿ ನಮೂದಿಸಿದಂತೆ ಕಾಮಗಾರಿಗಳ ಗುಣಮಟ್ಟದಿಂದ ಕೂಡಿರಬೇಕು. ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಷರತ್ತಿನಂತೆ ಕಾಲಕಾಲಕ್ಕೆ ಪ್ರಗತಿ ಹಾಗೂ ಗುಣಮಟ್ಟವನ್ನು ಪರಿಶೀಲನೆ ನಡೆಸಿ, ಪ್ರಗತಿ ಸಾಧಿಸದಿದ್ದವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿ, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕ್ರಮಕೈಗೊಳ್ಳಬೇಕು. ಪ್ರತಿ ವರ್ಷ ಎಸ್ ಆರ್ ದರ ಹೆಚ್ಚಾಗುತ್ತದೆ. ನಿಗದಿತ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಿ.ಎಸ್. ಶಿವಕುಮಾರ್, ಮುಖ್ಯ ಅಭಿಯಂತರರಾದ ವೀರಣ್ಣ ನಗರೂರು, ರವೀಂದ್ರನಾಥ್, ಕಾರ್ಯನಿರ್ವಹಕ ಅಭಿಯಂತರರು ಹಾಜರಿದ್ದರು.




