ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ನೇಮಕ ಬಹುತೇಕ ಖಚಿತವಾಗಿದ್ದರೂ, ಅಧಿಕೃತ ಆದೇಶ ನಾನಾ ಕಾರಣಗಳಿಂದ ತಡವಾಗುತ್ತಿದೆ. ಇದೇ ಸಂದರ್ಭವನ್ನ ಬಳಸಿಕೊಂಡ ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕರುಗಳು ಮೂರು ದಿನದ ಹಿಂದೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲಿ ಸೀಕ್ರೆಟ್ ಮೀಟಿಂಗ್ ನಡೆಸಿದ್ದಾರೆ. ಅಲ್ಲಿ ನೀವೇ ಕೆಪಿಸಿಸಿ ಅಧ್ಯಕ್ಷರಾಗಿ ಎಲ್ಲರು ಒಟ್ಟಾಗಿ ಕೆಲಸ ಮಾಡಿ ಪಕ್ಷ ಅಧಿಕಾರಕ್ಕೆ ತರೋಣ ನೀವೇ ಸಿಎಂ ಆಗಬಹುದು ಎಂದು ಮಲ್ಲಿಕಾರ್ಜುನ ಖರ್ಗೆ ಮನವೊಲಿಕೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಆದರೆ ಕೇಳುವಷ್ಟು ಕೇಳಿದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಒಂದು ಹಂತದಲ್ಲಿ ಫುಲ್ ರಾಂಗ್ ಆಗಿದ್ದಾರೆ. 45 ವರ್ಷದ ರಾಜಕೀಯ ಜೀವನದಲ್ಲಿ ನನಗೆ ಏನೆಲ್ಲಾ ಅನ್ಯಾಯ ಆಯಿತು ನೆನಪಿದೆ ಎಂದು ಗರಂ ಆಗಿದ್ದಾರೆ. ನಾನು ವಿಪಕ್ಷ ನಾಯಕನಾಗಿದ್ದಾಗ ಏನಾಯ್ತು? ನಾನು ಕೆಪಿಸಿಸಿ ಅಧ್ಯಕ್ಷನಾದಾಗ ಏನಾಯ್ತು? ಈ ಹಿಂದೆ 2004 ರಲ್ಲಿ ಜೆಡಿಎಸ್ ಜೊತೆ ಸಮ್ಮಿಶ್ರ ಸರ್ಕಾರ ರಚಿಸುವಾಗ ಏನಾಯ್ತು? ಎಲ್ಲವೂ ನೆನಪಿದೆ. ನಮ್ಮ ನಾಯಕರುಗಳು ಮನಸ್ಸು ಮಾಡಿದ್ದರೆ ನಾನು ಯಾವಾಗಲೋ ರಾಜ್ಯದ ಮುಖ್ಯಮಂತ್ರಿ ಆಗಬಹುದಿತ್ತು. ಆದರೆ ಈಗ ರಾಜ್ಯ ಸುತ್ತಿ ಪಕ್ಷ ಕಟ್ಟೋಕೆ ಸಾಧ್ಯವಿಲ್ಲ ಬಿಟ್ಟುಬಿಡಿ ಎಂದಿದ್ದಾರೆ ಎನ್ನಲಾಗಿದೆ.
ಆ ಮೂಲಕ ಶಿಸ್ತಿನ ಸಿಪಾಯಿ ಮನಸಲ್ಲೂ ಪಕ್ಷದ ನಾಯಕರ ವಿರುದ್ಧ ಇರುವ ಆಕ್ರೋಶ ಎಂತದ್ದು ಅನ್ನೋದು ಹಿರಿಯ ನಾಯಕರಿಗೆ ಗೊತ್ತಾಗಿದೆ. ಡಿಕೆಶಿ ಅಂಗಳದ ಚೆಂಡನ್ನ ಖರ್ಗೆಯವರ ಅಂಗಳಕ್ಕೆ ಕೊಂಡೊಯ್ಯಲು ಸೀಕ್ರೆಟ್ ಆಪರೇಷನ್ ನಡೆಸಿದ ಹಿರಿಯ ನಾಯಕರುಗಳು ಬಂದ ದಾರಿಗೆ ಸುಂಕವಿಲ್ಲದೆ ಮನೆ ಸೇರಿಕೊಂಡ ಇಂಟರೆಸ್ಟಿಂಗ್ ಘಟನೆ ಸದ್ದಿಲ್ಲದೆ ಕೈ ಪಾಳಯದಲ್ಲಿ ನಡೆದು ಹೋಗಿದೆ.