– ಅಮಿತ್ ಶಾ ಟು ಜೆ.ಪಿ ನಡ್ಡಾ ಕಡೆ ಕ್ಯಾಬಿನೆಟ್ ಸರ್ಕಸ್
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸರ್ಕಸ್ ಮುಂದುವರಿದಿದೆ. ಯಡಿಯೂರಪ್ಪ ದಾವೋಸ್ ಪ್ರವಾಸದಲ್ಲಿದ್ರೂ ಕ್ಯಾಬಿನೆಟ್ ಬಗ್ಗೆಯೇ ಚಿಂತೆ. ವಿದೇಶದಲ್ಲಿದ್ದುಕೊಂಡೇ ಆಪ್ತರಿಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಜನವರಿ 29ಕ್ಕೆ ಸಂಪುಟ ವಿಸ್ತರಣೆಗೆ ಸಜ್ಜಾಗುವಂತೆ ಯಡಿಯೂರಪ್ಪ ಸೂಚಿಸಿದ್ದಾರಂತೆ. ಅಂದಹಾಗೆ ಜನವರಿ 27ರಂದು ಸಂಜೆ ದೆಹಲಿಗೆ ಯಡಿಯೂರಪ್ಪ ತೆರಳುವ ಸಾಧ್ಯತೆ ಇದ್ದು, ಜನವರಿ 28 ರಂದು ನೂತನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ ಅಂತ ಯಡಿಯೂರಪ್ಪ ಆಪ್ತ ವಲಯದಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಒಂದು ವೇಳೆ ಬಿಜೆಪಿ ಹೈಕಮಾಂಡ್ ಮಾತುಕತೆ ವೇಳೆ ಸಂಪುಟಕ್ಕೆ ಒಪ್ಪಿಗೆ ಸಿಕ್ಕಿದ್ರೆ ಶೀಘ್ರದಲ್ಲೇ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನ ಫಿಕ್ಸ್ ಮಾಡುತ್ತಾರೆ ಎನ್ನಲಾಗಿದೆ. 28ರಂದು ಪಟ್ಟಿ ಓಕೆಯಾದ ಬಳಿಕ ಜನವರಿ 29ಕ್ಕೆ ನೂತನ ಸಚಿವರ ಪ್ರಮಾಣ ವಚನ ಸಾಧ್ಯತೆ ಇದ್ದು, ಈಗಾಗಲೇ ಆಪ್ತರ ಬಳಿ ಪ್ರಮಾಣ ವಚನ ಸ್ವೀಕಾರದ ದಿನಾಂಕದ ಬಗ್ಗೆ ಯಡಿಯೂರಪ್ಪ ಸುಳಿವು ನೀಡಿದ್ದಾರೆ ಎನ್ನಲಾಗಿದೆ. ಸಂಪುಟ ವಿಸ್ತರಣೆ ವಿಳಂಬಕ್ಕೆ ಸಿಎಂ ಯಡಿಯೂರಪ್ಪ ಹೊಸ ಸೂತ್ರ ರೆಡಿ ಮಾಡಿ ಇಟ್ಟುಕೊಂಡಿದ್ದಾರೆ ಅನ್ನೋದು ಲೇಟೆಸ್ಟ್ ಸುದ್ದಿ.
ಯಡಿಯೂರಪ್ಪ ಹೊಸ ಸೂತ್ರದ ಅನ್ವಯ ಹಾಲಿ ಗೆದ್ದಿರುವ 11 ಮಂದಿಯಲ್ಲಿ ಮೊದಲ ಹಂತದಲ್ಲಿ 8 ಮಂದಿಗೆ ಸಚಿವ ಸ್ಥಾನ ಬಹುತೇಕ ಖಚಿತ ಎನ್ನಲಾಗುತ್ತಿದೆ. ಉಳಿದ ಮೂವರಿಗೆ ಪೆಂಡಿಂಗ್ ಇಡುವ ಸಾಧ್ಯತೆ ಇದ್ದು, 8 ಮಂದಿ ಗೆದ್ದ ಶಾಸಕರ ಜೊತೆ ಇಬ್ಬರು ಮೂಲ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ಸಾಧ್ಯತೆ ಅನ್ನೋದು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ಅಂದಹಾಗೆ ಜೂನ್ ತನಕ 6 ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲು ಬಿಎಸ್‍ವೈ ಹೊಸ ಮಾಸ್ಟರ್ ಗೇಮ್ ಮಾಡಿದ್ದು, ಯಡಿಯೂರಪ್ಪ ಪ್ಲಾನ್ ಗೆ ಜೆ.ಪಿ ನಡ್ಡಾ ಗ್ರೀನ್ ಸಿಗ್ನಲ್ ಕೊಡ್ತಾರಾ..? ಅಮಿತ್ ಶಾ ರೀತಿ ವಾಪಸ್ ಕಳಿಸ್ತಾರಾ..? ಎಂಬುದೇ ಸದ್ಯದ ಕುತೂಹಲವಾಗಿದೆ.