ಚಿಕ್ಕೋಡಿ(ಬೆಳಗಾವಿ): ಗಾಯನ ಸ್ಪರ್ಧೆಯಲ್ಲಿ ನಟ ವಿಜಯ ರಾಘವೇಂದ್ರ ಹಾಡು ಹಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯಿಂದ ಹಾಡುವ ಕೋಗಿಲೆಗಳಿಗೊಂದು ಸುವರ್ಣ ಅವಕಾಶವನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಆಯೋಜನೆ ಮಾಡಿದ್ದ, ಐಹೊಳೆ ಗಾಯನ ಪ್ರತಿಭಾ ಪ್ರಶಸ್ತಿ ಸೀಜನ್ 4 ರನ್ನು ವಿಜಯ ರಾಘವೇಂದ್ರ ಅವರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಸದ್ಗುರುವಿನ ಸನ್ನಿಧಿ ಎಂಬ ಭಕ್ತಿ ಗೀತೆಗಳ ಧ್ವನಿ ಸುರುಳಿಯನ್ನು ಕೂಡ ನಟ ಬಿಡುಗಡೆಗೊಳಿಸಿದರು. ಅಲ್ಲದೆ ‘ನೀಡು ಶಿವಾ ನೀಡದಿರು ಶಿವಾ’ ಹಾಡನ್ನ ಹಾಡುವ ಮೂಲಕ ವಿಜಯ ರಾಘವೇಂದ್ರ ಜನರನ್ನ ಖುಷಿಪಡಿಸಿದರು.
ಐಹೊಳೆ ಗಾಯನ ಪ್ರತಿಭಾ ಪ್ರಶಸ್ತಿ ಸೀಜನ್ 4 ರ ಹಿನ್ನೆಲೆಯಲ್ಲಿ 14 ವರ್ಷದೊಳಗಿನ ಮಕ್ಕಳಿಗೆ ಚಲನಚಿತ್ರ ಗೀತೆಗಳ ಸ್ಪರ್ಧೆ, 15 ರಿಂದ 30 ವರ್ಷದೊಳಗಿನ ಯುವಕ-ಯುವತಿಯರಿಗಾಗಿ ಚಲನಚಿತ್ರ ಗೀತೆಗಳ ಸ್ಪರ್ಧೆ ಹಾಗೂ ಜಾನಪದ ಗೀತೆಗಳ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ಬೆಳಗಾವಿ, ಉತ್ತರ ಕನ್ನಡ, ಗದಗ, ಹಾವೇರಿ, ವಿಜಯಪುರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಹಾಡುವ ಕೋಗಿಲೆಗಳು ತಮ್ಮ ಸವಿಗಾನದ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಪ್ರತಿಯೊಂದು ಸ್ಪರ್ಧೆಯಲ್ಲಿಯೂ ಕೂಡ ಮೂವರನ್ನು ಆಯ್ಕೆ ಮಾಡಿ ಬಹುಮಾನವನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ, ಶಾಸಕ ದುರ್ಯೋಧನ ಐಹೊಳೆ, ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರುಣ ಐಹೊಳೆ, ಹಾಸ್ಯ ನಟ ಪ್ರವೀಣ ಘಸ್ತಿ ಸೇರಿದಂತೆ ಹಲವರು ವಿತರಿಸಿದರು.