– ಮದ್ವೆ ಮನೆಯ ಕುಟುಂಬಸ್ಥರಲ್ಲಿ ಆತಂಕ
ಮಡಿಕೇರಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ವೀರಾಜಪೇಟೆ ನಿವಾಸದ ಮೇಲೆ ಐಟಿ ದಾಳಿಯಾಗಿರುವುದು ಭಾರೀ ಸುದ್ದಿಗೆ ಗ್ರಾಸವಾಗಿದೆ. ಈ ದಾಳಿಯಿಂದ ಏನಾಗಿದೆ, ಏತಕ್ಕಾಗಿ ದಾಳಿ ನಡೆದಿದೆ, ಏನೇನು ಲಭ್ಯವಾಗಿದೆ ಎಂಬಿತ್ಯಾದಿ ಕುತೂಹಲಗಳು ಸಹಜವಾಗಿಯೇ ಸೃಷ್ಟಿಸಿದೆ.
ಐಟಿ ದಾಳಿ ನಡೆದಿರುವುದು ನಟಿ ರಶ್ಮಿಕಾ ವಿರುದ್ಧ ಮಾತ್ರವೇ, ಆಕೆಯ ತಂದೆ ಉದ್ಯಮಿಯಾಗಿರುವ ಮದನ್ ಮಂದಣ್ಣ ಅವರ ಕುರಿತಾಗಿಯೇ ಅಥವಾ ಇವರಿಬ್ಬರ ಮೇಲಿನ ಜಂಟಿ ದಾಳಿಯೇ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಅಲ್ಲದೆ ಈ ಕುಟುಂಬಕ್ಕೆ ಕೆಲವು ರಾಜಕೀಯ ವ್ಯಕ್ತಿಗಳ ನಂಟು ಇದ್ದು, ಈ ಕಾರಣದಿಂದಾಗಿ ದಾಳಿ ನಡೆಯಿತೇ ಎಂಬುದು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮಾಹಿತಿಗಳ ಪ್ರಕಾರ ರಾಜಕೀಯ ನಂಟಿನ ಥಳುಕಿನ ಹಿನ್ನೆಲೆಯಲ್ಲಿ ದಾಳಿ ನಡೆದಿಲ್ಲ ಎನ್ನಲಾಗಿದೆ.
ರಶ್ಮಿಕಾರ ವ್ಯವಹಾರದ ಕುರಿತಾಗಿಯೇ ದಾಳಿಗೆ ಮುಂದಾಗಲಾಗಿದೆ. ಇದರೊಂದಿಗೆ ಅವರ ತಂದೆಯ ವಹಿವಾಟು ಸೇರಿಕೊಂಡಿರುವುದಾಗಿ ತಿಳಿದು ಬಂದಿದೆ. ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ ನಡೆದಿರುವ ಐಟಿ ದಾಳಿಗಳನ್ನು ಅವಲೋಕಿಸಿದಾಗ ಇದೊಂದು ಕೇವಲ ಸಣ್ಣ ಪ್ರಮಾಣ ವಿಚಾರವೆನ್ನಲಾಗುತ್ತಿದೆ. ಈ ತನಕ ನಡೆದಿರುವ ದಾಳಿಗಳೆಲ್ಲವೂ ಬಹುತೇಕ 10 ಕೋಟಿಗಳಿಗೆ ಮಿಗಿಲಾದದ್ದಾಗಿದೆ. ಐಟಿ ದಾಳಿಯಲ್ಲಿ ಹಣ ಹಾಗೂ ವ್ಯವಹಾರ ಕೇವಲ ನಾಲ್ಕೈದು ಕೋಟಿಗಳು ಎಂದು ಹೇಳಲಾಗಿದೆ. ಅದರಲ್ಲೂ ಈ ಮೊತ್ತ ಕೇವಲ ಒಬ್ಬರದ್ದಲ್ಲ. ತಂದೆ ಹಾಗೂ ಮಗಳದ್ದು ಸೇರಿ ಇಷ್ಟು ಮೊತ್ತವೆಂದು ಹೇಳಲಾಗುತ್ತಿದೆ.
ದಾಳಿ ಸಂದರ್ಭದಲ್ಲಿ ಮನೆಯಲ್ಲಿ 25 ರೂ. ಲಕ್ಷ ನಗದು ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಣ ಕೂಡ ಮದನ್ ಮಂದಣ್ಣ ಅವರ ಒಡೆತನದ ಸೆರಿನಿಟಿ ಹಾಲ್ ನಲ್ಲಿ ನಾಲ್ಕು-ಐದು ಮದುವೆಗೆ ಮುಂಗಡವಾಗಿ ಹಣ ನೀಡಿದ್ದು ಮನೆಯಲ್ಲಿ ಇಟ್ಟಿದ್ದರು ಎಂದು ಹೇಳಲಾಗಿದೆ. ಮದುವೆಗೆ ಇಟ್ಟಿದ್ದ ಹಣವನ್ನು ಐಟಿ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಹಾಲ್ ಗೆ ಮುಂಗಡವಾಗಿ ಹಣ ನೀಡಿರುವ ಮದುವೆ ಮನೆಯ ಕುಟುಂಬಸ್ಥರು ಆಂತಕಕ್ಕೆ ಒಳಗಾಗಿದ್ದಾರೆ.
21 ರಂದು ವಿಚಾರಣೆ ನಡೆಸುವುದಾಗಿ ಐಟಿ ಅಧಿಕಾರಿಗಳು ಹೇಳಿದ್ದಾರೆ.