ನವದೆಹಲಿ: ದೆಹಲಿ ವಿಧಾನಸಭೆ ಚುನಾವಣಾ ರಣೋತ್ಸಾಹದಲ್ಲಿರುವ ಆಮ್ ಆದ್ಮಿ ಪಾರ್ಟಿ ಒಂದೇ ಹಂತದಲ್ಲಿ 70 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ. ಇತ್ತ ಬಿಜೆಪಿ ತನ್ನ ಮೊದಲು ಪಟ್ಟಿಯಲ್ಲಿ 57 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಆದರೆ ಕಾಂಗ್ರೆಸ್ ಮಾತ್ರ ಇದುವರೆಗೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡದೆ ಕುತೂಹಲ ಮೂಡಿಸಿದೆ.
2015ರ ಚುನಾವಣೆಯಲ್ಲಿ 70 ಕ್ಷೇತ್ರಗಳ ಪೈಕಿ 67 ಸ್ಥಾನದಲ್ಲಿ ದಾಖಲೆಯ ಗೆಲವು ಸಾಧಿಸಿದ್ದ ಆಮ್ ಆದ್ಮಿ ಪಾರ್ಟಿ ಅದೇ ಉತ್ಸಾಹದಲ್ಲಿ ಪ್ರಚಾರ ಕಾರ್ಯ ಆರಂಭಿಸಿದೆ. ಮೂರು ಸ್ಥಾನಗಳನ್ನ ಪಡೆದು ಎರಡನೇ ಸ್ಥಾನದಲ್ಲಿದ್ದ ಬಿಜೆಪಿ, ಕಳೆದ ಚುನಾವಣೆಯಲ್ಲಿ ಹೆಚ್ಚು ಮತಗಳನ್ನ ಪಡೆದ ಮುಖಗಳಿಗೆ ಆದ್ಯತೆ ನೀಡಿದೆ. ಆದರೆ 2015ರಲ್ಲಿ ಖಾತೆ ತೆರೆಯದೆ ಮುಖಭಂಗ ಅನುಭವಿಸಿದ್ದ ಕಾಂಗ್ರೆಸ್ ಈ ಬಾರಿ ಟಿಕೆಟ್ ಹಂಚಿಕೆ ವಿಳಂಬ ಮಾಡುವ ಮೂಲಕ ಎಚ್ಚರಿಕೆಯ ನಡೆ ಅನುಸರಿಸಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ವಿಳಂಬ ಹಿಂದೆ ಕಾಂಗ್ರೆಸ್ ಖಾತೆ ತೆರೆಯುವ ಸ್ಟಾಟರ್ಜಿ ಇದೆ ಎನ್ನಲಾಗಿದೆ. 2015ರಲ್ಲಿ ಒಂದು ಕ್ಷೇತ್ರದಲ್ಲಿ ಗೆಲ್ಲದ ಕಾಂಗ್ರೆಸ್ ಈ ಬಾರಿ ಅಳೆದು ತೂಗಿ ಟಿಕೆಟ್ ಫೈನಲ್ ಮಾಡುತ್ತಿದೆ. ಗುರುವಾರ ಸಭೆ ಮಾಡಿದ್ದ ಕಾಂಗ್ರೆಸ್ ಶುಕ್ರವಾರ ಪಟ್ಟಿ ಪ್ರಕಟಿಸಿವುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ತಂತ್ರ ಬದಲಿಸಿರುವ ಕಾಂಗ್ರೆಸ್ ಟಿಕೆಟ್ ಘೋಷಣೆ ಶನಿವಾರಕ್ಕೆ ಮುಂದೂಡಿದೆ.
ಆಪ್ ಮತ್ತು ಬಿಜೆಪಿ ಘೋಷಿಸಿರುವ ಎರಡು ಪಟ್ಟಿಗಳನ್ನು ಅನುಸರಿಸಿ ಕಾಂಗ್ರೆಸ್ ಸರಿಯಾದ ಪೈಪೋಟಿ ನೀಡಬಹುದಾದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪ್ಲ್ಯಾನ್ ಮಾಡಿದೆ. ಈ ಮೂಲಕ ಕಾಂಗ್ರೆಸ್ ಈ ಬಾರಿ ಅಕೌಂಟ್ ತೆರೆಯುವ ಪ್ರಯತ್ನಕ್ಕೆ ಮುಂದಾಗಿದೆ.
ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದ ಬೆನ್ನೆಲೇ ಶನಿವಾರ ಸಭೆ ಕರೆದಿರುವ ಕಾಂಗ್ರೆಸ್ ಮತ್ತೊಂದು ಹಂತದಲ್ಲಿ ಚುನಾವಣಾ ಸಮಿತಿ ಸಭೆ ನಡೆಸಲಿದೆ. ಈ ಸಭೆಯಲ್ಲಿ ಆಪ್ ಮತ್ತು ಬಿಜೆಪಿ ನೀಡಿರುವ ಟಿಕೆಟ್‍ಗಳನ್ನು ಆಧರಿಸಿ ತನ್ನ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಲು ಚಿಂತಿಸಿದ್ದು, ಈ ಮೂಲಕ ಟಿಕೆಟ್ ಹಂಚಿಕೆಯಲ್ಲಿ ಎಚ್ಚರಿಕೆ ನಡೆ ಇಟ್ಟಿರುವ ಕಾಂಗ್ರೆಸ್ ಈ ಬಾರಿ ಖಾತೆ ತೆರೆಯಲೆಬೇಕು ಎನ್ನುವ ಹಠಕ್ಕೆ ಬಿದ್ದಿದೆ.
ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಫೆಬ್ರವರಿ 8ರಂದು ನಡೆಯಲಿದ್ದು, ಫೆಬ್ರವರಿ 11ಕ್ಕೆ ಫಲಿತಾಂಶ ಪ್ರಕಟವಾಗಲಿದೆ.