ಡಿಕೆಗೆ ಪಟ್ಟಾಭಿಷೇಕ – ಪಂಚ ದೇವತೆಗಳು, ಎರಡು ದೈವಮಾನವ ಶಕ್ತಿ

Public TV
5 Min Read
dk panchama copy

ಬೆಂಗಳೂರು: ಕರ್ನಾಟಕದ ರಾಜಕೀಯದಲ್ಲಿ ಕನಕಪುರ ಬಂಡೆ ಡಿಕೆ ಅಬ್ಬರಿಸಿ ಬೊಬ್ಬರಿಸಿದಷ್ಟೇ ಶಸ್ತ್ರಾಸ್ತ ಕಳಚಿ ಇಟ್ಟಿದ್ದಾರೆ. ಇನ್ನೇನು ಮುಗಿಯಿತು ಎನ್ನುವಷ್ಟು ಸೋತು ಹೋಗಿದ್ದಾರೆ. ಆದರೆ “ಬಂಡೆ” ಅಷ್ಟು ಸುಲಭವಾಗಿ ಅಲುಗಾಡಲ್ಲ. ಈಗ ಮತ್ತೆ ಅಧಿಕಾರದ ರಥವೇರಿ ಕೂತಿದ್ದಾರೆ. ಅಷ್ಟಕ್ಕೂ ಬಂಡೆಯ ಯಶಸ್ಸಿನ ರಥ ಓಡಿಸುವ ಪಂಚ ದೇವತೆ ಮತ್ತು ಎರಡು ಅಗೋಚರ “ಕೈ” ಕೆಲಸ ಮಾಡಿದೆ.

ಕನಕಪುರ ಬಂಡೆ, ರಣ ಬೇಟೆಗಾರ, ಥೇಟು ಕಲ್ಲುಬಂಡೆ ಅದೆಷ್ಟು ಸಕ್ಸಸ್, ಅದೆಷ್ಟು ನೋವು-ಸೋಲು, ಅದೆಷ್ಟು ಹಣ-ಸಂಪತ್ತು, ಐಶ್ವರ್ಯ ಕೊನೆಗೆ ಜೈಲಿನ ಕಗ್ಗತ್ತಲು ಹೀಗೆ ರಾಜಕೀಯ ಬದುಕಿನುದ್ದಕ್ಕೂ ಎಲ್ಲವನ್ನು ಅನುಭವಿಸಿಬಿಟ್ಟರು. ತಿಹಾರ್ ಜೈಲಿನ ಕತ್ತಲೆ ಕೋಣೆಯಲ್ಲೇ ಬಂಡೆ ಕರಗಿಹೋಯ್ತು ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ ಅದು ಹಾಗೆ ಆಗಲಿಲ್ಲ. ಬಂಡೆ ಚಿಗುರಿಕೊಂಡಿದೆ. ಮತ್ತೆ ಕೆಪಿಸಿಸಿ ಕಾಂಗ್ರೆಸ್‍ನ ಸಾರಥ್ಯವಹಿಸುವ ಅದೃಷ್ಟ ಸಿಕ್ಕಿಬಿಟ್ಟಿದೆ. ಬಂಡೆ ಬದುಕಿನಲ್ಲಿ ಅಷ್ಟು ಸುಲಭವಾಗಿ ಯಾಕೆ ಸೋಲಲ್ಲ. ಸದಾ ಲಕ್ಕಿ ಚಾರ್ಮ್. ಆದರೆ ಬಂಡೆಯ ಹಿಂದೆ ಇರುವುದು ಪಂಚ ದೇವತೆಗಳ ವರಪ್ರಸಾದ. ಕಲ್ಲು ಬಂಡೆಯ ಹಿಂದೆ ಎರಡು ದೈವಮಾನವನರ ಕೃಪಾಕಟಾಕ್ಷ. ಈ ದೈವ ಬಲವೇ ಡಿಕೆಯನ್ನು ಎಂದು ಅಲುಗಾಡದ ಬಂಡೆಯಂತೆ ಮಾಡಿಬಿಟ್ಟಿದೆ.

ಬಂಡೆ ಕಾಯುವ ಪಂಚ ಶಕ್ತಿ ಯಾವ್ಯಾವು?
1. ಕಬ್ಬಾಳ್ಳಮ್ಮ ಡಿಕೆ ಪಾಲಿನ ಶಕ್ತಿದೇವತೆ
ದೊಡ್ಡಾಲದಳ್ಳಿಯಲ್ಲಿರುವ ಕಬ್ಬಾಳಮ್ಮ ಡಿಕೆ ಪಾಲಿನ ಶಕ್ತಿದೇವತೆ. ಇಡೀ ರಾಜಕೀಯ ಬದುಕಿನ ಅಷ್ಟು ಏರಿಳಿತಗಳಲ್ಲೂ ಡಿಕೆ ನಂಬಿದ್ದು ಕಬ್ಬಾಳಮ್ಮ. ಮನೆ ದೇವರು ಡಿಕೆಯ ಕ್ಷೇತ್ರ ದೇವತೆಯೂ ಆಗಿರುವ ಕಬ್ಬಾಳಮ್ಮನ ಸನ್ನಿಧಾನಕ್ಕೆ ಡಿಕೆ ಪ್ರತಿ ಬಾರಿಯೂ ಹೋಗುತ್ತಿರುತ್ತಾರೆ. ಆದಾಯ ತೆರಿಗೆ ಇಕ್ಕಳಕ್ಕೆ ಸಿಲುಕಿದಾಗಲೂ, ತಿಹಾರ್ ಜೈಲಿನಿಂದ ಬಂದಾಗಲೂ ಡಿಕೆ ಕಬ್ಬಾಳಮ್ಮನ ಸನ್ನಿಧಾನಕ್ಕೆ ಹೋಗಿ ಪೂಜೆ ಮಾಡಿದ್ದಾರೆ. ಈಗಲೂ ಅಧಿಕಾರ ಸಿಗಲು ಕಬ್ಬಾಳಮ್ಮನ ಶಕ್ತಿ ನನ್ನ ಮೇಲಿದೆ ಎನ್ನುವುದು ಡಿಕೆ ನಂಬಿಕೆ. ಡಿಕೆ ಜೈಲಿನಲ್ಲಿದ್ದಾಗಲೂ ಇಲ್ಲಿ ಅವರ ಕುಟುಂಬಸ್ಥರು ಪೂಜೆ ಮಾಡಿದ್ದರು. ಕಬ್ಬಾಳಮ್ಮನ ಕುಂಕಮವನ್ನು ಅವರ ಅಭಿಮಾನಿಗಳು ದೆಹಲಿಯಲ್ಲಿದ್ದ ಡಿಕೆಗೂ ಕೊಟ್ಟು ಬಂದಿದ್ದರು.

RMG DKSHI 3

2. ಕೆಂಕರಮ್ಮ – ಡಿಕೆ ಕುಲದೇವತೆ ಮನೆದೇವತೆ
ಕಬ್ಬಾಳಮ್ಮನ ಶಕ್ತಿ ಕೆಂಕರಮ್ಮ ಅನುಗ್ರಹ ತನ್ನ ಮೇಲೆ ಸದಾ ಇರಲಿದೆ ಎನ್ನುವ ನಂಬಿಕೆ ಡಿಕೆಯದ್ದು. ನಾಮಪತ್ರ ಸಲ್ಲಿಕೆ ಇರಲಿ, ರಾಜಕೀಯದ ಸಣ್ಣಪುಟ್ಟ ನಿರ್ಧಾರದಿಂದ ಹಿಡಿದು ಬದುಕಿನಲ್ಲಿ ಸೋಲು-ಗೆಲುವಿನ ಸಂದರ್ಭದಲ್ಲಿ ಡಿಕೆ ಕೆಂಕರಮ್ಮ ಸನ್ನಿಧಿಯಲ್ಲಿರುತ್ತಾರೆ. ಕನಕಪುರದ ಕೋಟೆಯೊಳಗೆ ಡಿಕೆ ಸಾಮ್ರಾಜ್ಯದ ಹಿಂದೆ ಕೆಂಕರಮ್ಮ ಶಕ್ತಿ ಇದೆ. ನನ್ನ ಬದುಕಿನ ದುಃಖ-ದುಮ್ಮಾನ ಬಗೆಹರಿಸಿ, ಒಳ್ಳೆಯದು ಮಾಡುವುದು ಕೆಂಕರಮ್ಮ ಎಂಬ ಡಿಕೆಗೆ ಅಪಾರ ಭಕ್ತಿಯಿದೆ. ಡಿಕೆ ತಾಯಿ ಮಗ ಜೈಲಲ್ಲಿ ಇದ್ದಾಗ ಜಾಮೀನು ಸಿಗಲು ಇಲ್ಲಿ ಪೂಜೆಯನ್ನು ಕೂಡ ಮಾಡಿಸಿದ್ದರು. ಈ ಸನ್ನಿಧಾನದ ಪೂಜೆಯಿಂದ ಅಧಿಕಾರ ಸಿದ್ಧಿಯಾಗಿದೆ ಎನ್ನುವ ನಂಬಿಕೆ ಡಿಕೆಗಿದೆ.

kenkeramma

3. ಮೈಲಾರಲಿಂಗೇಶ್ವರನಿಗೆ ಉಘೆ ಉಘೆ ಅಂದಿದ್ದ ಡಿಕೆ
ಮೈಲಾರಲಿಂಗೇಶ್ವರ ಬಳ್ಳಾರಿಯ ಈ ಸನ್ನಿಧಾನದಲ್ಲಿ ಡಿಕೆ ಒಂದು ಬಾರಿ ಎಡವಟ್ಟು ಮಾಡಿದ್ದರು. ಇದೇ ಕಾರಣಕ್ಕೆ ಐಟಿ ದಾಳಿಯಾಗಿದೆ ಎಂದು ದೇಗುಲದ ಟ್ರಸ್ಟಿ ಹೇಳಿದ್ದರು. 2018ರಲ್ಲಿ ಮೈಲಾರಲಿಂಗೇಶ್ವರನ ಕಾರ್ಣಿಕ ಹೇಳುವ ಸಂದರ್ಭದಲ್ಲಿ ಡಿಕೆಯಿದ್ದ ಹೆಲಿಕಾಪ್ಟರ್ ನಲ್ಲಿ ದೇಗುಲದ ಆಲಯ ಸುತ್ತು ಹಾಕಿತ್ತು. ಇದರಿಂದ ಡಿಕೆ ಐಟಿ ದಾಳಿಗೆ ಒಳಾಗಾಗಿ ಸಂಕಷ್ಟಕ್ಕೆ ಗುರಿಯಾಗಿದ್ದರು ಎಂದು ಟ್ರಸ್ಟಿ ಕೂಡ ಹೇಳಿದ್ದರು. ಜನಾರ್ದನ ರೆಡ್ಡಿ ಕೂಡ ಇದೇ ತಪ್ಪು ಮಾಡಿ ಸಮಸ್ಯೆ ಎದುರಿಸಿದ್ದರು ಎನ್ನಲಾಗಿದೆ. ಏನನಿಸುತ್ತೋ ಏನೋ ಡಿಕೆ ಅಂದಿನ ಘಟನೆಯ ಬಳಿಕೆ ಮೈಲಾರನಿಗೆ ಉಘೇ ಉಘೇ ಎಂದರು. ಅಲ್ಲಿ ತಪ್ಪು ಕಾಣಿಕೆ ಹಾಕಿ ಪೂಜೆ ಮಾಡಿದ್ದರು. ಇದಾದ ಬಳಿಕ ಬಂಡೆ ಕಷ್ಟವೂ ಕರಗಿದೆ ಎನ್ನುವ ಮಾತಿದೆ.

DK SHIVAKUMAR

4. ಋಷ್ಯಶೃಂಗನ ಆರಾಧಕರು ಡಿಕೆ
ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಮಳೆಯ ಸಮಸ್ಯೆ ಎದುರಾಗಿದ್ದಾಗ ಡಿಕೆಶಿ ಖುದ್ದು ಚಿಕ್ಕಮಗಳೂರಿನ ಕಿಗ್ಗಾದಲ್ಲಿರುವ ಮಳೆ ದೇವರು ಋಷ್ಯ ಶೃಂಗ ದೇವಾಲಯದಲ್ಲಿ ಪರ್ಜನ್ಯ ಹೋಮ ನಡೆಸಿದ್ದರು. ಇದರಿಂದ ಮಳೆ ಬಂತು. ಅಂದಿನಿಂದ ಡಿಕೆ ಅಧಿಕಾರದ ಸಮಸ್ಯೆಯಾದಗಲೆಲ್ಲ ಋಷ್ಯ ಶೃಂಗಕ್ಕೆ ಹೋಗಿ ದರ್ಶನ ಪಡೆದುಕೊಳ್ಳುತ್ತಿದ್ದರು. ಅಧಿಕಾರದ ಸಮಸ್ಯೆ, ತೊಂದರೆ ಅಡೆತಡೆ ಏನೇ ಇದ್ದರೂ ಇಲ್ಲಿ ಪೂಜೆ ಮಾಡಿದರೆ ಸರಿ ಹೋಗಲಿದೆ ಎನ್ನುವ ನಂಬಿಕೆ ಡಿಕೆ ಅವರಿಗಿದೆ. ಡಿಕೆಶಿ ಶೃಂಗೇರಿ ಶಾರಾದಮ್ಮನ ದರ್ಶನದ ಜೊತೆಗೆ ಋಷ್ಯ ಶೃಂಗದ ಆರಾಧಕರೂ ಆಗಿದ್ದಾರೆ.

DK SHIVAKUMAR 2

5. ಕಂಚಿ ಕಾಮಾಕ್ಷಿ, ಒಡಿಶಾದ ಶಕ್ತಿದೇವತೆಯ ಆರಾಧನೆ
ಡಿಕೆ ಶಿವಕುಮಾರ್ ಶಕ್ತಿಸ್ವರೂಪಿಣಿ ನೆಲೆಸಿರುವ ಕಂಚಿಯ ಕಾಮಾಕ್ಷಿ ದೇವಿಯ ಆರಾಧಕ. ತೀರಾ ಸಮಸ್ಯೆಗಳು ಆದಾಗ ರಾಜಕೀಯ ಹಿನ್ನೆಡೆಯಾದಾಗ ಡಿಕೆ ಕುಟುಂಬ ಸಮೇತರಾಗಿ ಹಲವು ಬಾರಿ ಪೂಜೆ ಸಲ್ಲಿಸಿದ್ದಾರೆ. ಒಡಿಶಾದ ಪವರ್ ಫುಲ್ ದುರ್ಗಾ ಸನ್ನಿಧಾನದಲ್ಲೂ ರಾಜಕೀಯ ಶತ್ರು ನಾಶತ್ವಕ್ಕಾಗಿ ರಕ್ತ ಕಲ್ಯಾಣಿ ಪೂಜೆಯನ್ನು ಡಿಕೆ ಮಾಡಿದ್ದರು. ಈ ಶಕ್ತಿದೇವತೆ ಆರಾಧನೆ, ಪೂಜೆ ಎಲ್ಲವೂ ಡಿಕೆಗೆ ರಾಜಕೀಯ ಮರುಜೀವ ಕೊಡಲಾಗಿದೆ ಎನ್ನಲಾಗಿದೆ.

ಎರಡು ದೈವಮಾನವರು ಬಂಡೆಯ ಮಹಾನ್ ಶಕ್ತಿ
ಶಕ್ತಿದೇವತೆಯನ್ನೇ ಆರಾಧಿಸುವ ಡಿಕೆಯ ಪ್ರತಿ ರಾಜಕೀಯ ನಿರ್ಧಾರದ ಹಿಂದೆ ಇಬ್ಬರು ದೈವಮಾನವರ ಸಲಹೆ ಇದೆ.

dkshi

1. ಅಜ್ಜಯ್ಯನ ಮಾತು ಡಿಕೆಗೆ ಶ್ರೀರಕ್ಷೆ
ನೊಣವಿನಕರೆಯ ಅಜ್ಜಯ್ಯ ಡಿಕೆ ಪಾಲಿಗೆ ಶಕ್ತಿ, ಗಾಡ್ ಫಾದರ್ ಇದ್ದಂತೆ. ಬದುಕಿನ ಅಷ್ಟು ನಿರ್ಧಾರವನ್ನು ತೆಗೆದುಕೊಳ್ಳುವುದು ಅಜ್ಜಯ್ಯನ ಅಣತಿ. ತನ್ನ ತಂದೆ ಸಾವಿನ ಸನಿಹದಲ್ಲಿದ್ದಾಗ, ಇನ್ನೇನು ಎರಡೇ ಗಂಟೆ ನಿಮ್ಮಪ್ಪ ಬದುಕೋದು ಎಂದಾಗ ಡಿಕೆಗೆ ಅಜ್ಜಯ್ಯನ ಬಗ್ಗೆ ತಿಳಿಯುತ್ತೆ. ಅಜ್ಜಯ್ಯನ ಬಳಿ ಓಡಿ ಹೋದಾಗ ಅಜ್ಜಯ್ಯ ಕೊಟ್ಟ ಬಿಲ್ವಪತ್ರೆ ತಂದೆಯನ್ನು ಕೆಲವರ್ಷ ಬದುಕಿಸಿತ್ತು ಎನ್ನಲಾಗಿದೆ. ಅಲ್ಲಿಂದ ಡಿಕೆ ಅಜ್ಜಯ್ಯನ ಅಣತಿಯಂತೆ ಸಾಗುತ್ತಾರೆ. ರಾಜಕೀಯದ ಅವಘಡವನ್ನು ಮೊದಲು ಎಚ್ಚರಿಕೆಯ ರೂಪದಲ್ಲಿ ಅಜ್ಜಯ್ಯ ರವಾನಿಸುತ್ತಾರೆ. ಐಟಿ ದಾಳಿ ವೇಳೆ, ಜೈಲು ವಾಸದ ಬಳಿಕ ಡಿಕೆ ಸೋತು ಹೋದಾಗಲೆಲ್ಲ ಅಜ್ಜಯ್ಯನ ಬಳಿ ಹೋಗ್ತಾರೆ. ಅಲ್ಲಿಂದ ಗೆಲುವಿನ ಶಕ್ತಿಯಾಗಿ ಹೊರಬರುತ್ತಾರೆ. ಅಷ್ಟೇ ಯಾಕೆ ಇಂದಿಗೂ ಡಿಕೆ ಅಜ್ಜಯ್ಯನ ಮಠದಲ್ಲಿ ಕೊಡುವ ತಿಲಕವನ್ನು ತಪ್ಪಿಸಲ್ಲ. ಹೀಗಾಗಿ ಅಜ್ಜಯ್ಯನ ಅಶೀರ್ವಾದ ಡಿಕೆ ಗೆಲುವಿನ ಸಾರಥಿ.

vinay guruji copy

2. ವಿನಯ್ ಗುರೂಜಿ, ಮಹದೇವಪೂಜಾರಿ ಮಾತು ತೆಗೆದುಹಾಕಲ್ಲ ಡಿಕೆ
ಅವಧೂತ ವಿನಯ್ ಗುರೂಜಿ ಸಾಕಷ್ಟು ಬಾರಿ ಡಿಕೆಗೆ ಮುಂದಾಗುವ ಘಟನೆಯ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರು ಎನ್ನಲಾಗಿದೆ. ಸೋಲಿನ ಲೆಕ್ಕಚಾರ, ಗೆಲುವಿನ ಕ್ಷಣದ ಬಗ್ಗೆಯೂ ಡಿಕೆ ಪಾಲಿಗೆ ಇವರು ತೆರದ ಪುಸ್ತಕದಂತೆ ಬಿಚ್ಚಿಡುತ್ತಾರೆ. ವಿನಯ್ ಗುರೂಜಿ ಹೇಳಿದ ಅಷ್ಟು ಪೂಜೆಗಳನ್ನು ಡಿಕೆ ಮಾಡುತ್ತಾರೆ. ಈ ಪೂಜೆಗಳೆಲ್ಲವೂ ಡಿಕೆ ಪಾಲಿಗೆ ಶ್ರೀರಕ್ಷೆಗಳಾಗಿದ್ವು. ಇನ್ನು ಯಾದಗಿರಿಯ ದುರ್ಗಮ್ಮ ದೇವಾಲಯದ ಅರ್ಚಕ ಮಹಾದೇವ ಪೂಜಾರಿ ಐಟಿ ರೇಡ್‍ಗೂ ಮುನ್ನ ಡಿಕೆಗೆ ನಿಮ್ಮ ಬದುಕಿನಲ್ಲಿ ಬಹುದೊಡ್ಡ ಕಂಟಕ ಎದುರಾಗಲಿದೆ ಎಂದಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಈ ಮಾತನ್ನು ಡಿಕೆ ನಿರ್ಲಕ್ಷ್ಯ ಮಾಡಿದ್ದರು. ಆದರೆ ಐಟಿ ರೇಡ್ ಬಳಿಕ ಡಿಕೆಗೆ ಅರಿವಾಗಿ ಈ ಸ್ವಾಮೀಜಿ ಮನೆಗೆ ಕರೆಯಿಸಿ ಕಂಟಕ ನಿವಾರಣೆಗೆ ಪೂಜೆಯನ್ನು ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *