– ಸಾವಿರಾರು ಅಂಗವಿಕಲರಿಗೆ ಉಚಿತ ಡ್ರೈವಿಂಗ್ ಕ್ಲಾಸ್
ಉಡುಪಿ: ಜಿಲ್ಲೆಯ ನಿವಾಸಿ ಜಗದೀಶ್ ಹುಟ್ಟಿನಿಂದಲೇ ಅಂಗವಿಕಲ. ಆದರೆ ಈ ಅಂಗವೈಕಲ್ಯ ಅವರ ಸಮಸ್ಯೆಯಾಗಿ ಉಳಿದಿಲ್ಲ. ಅದನ್ನು ಸವಾಲಾಗಿ ಸ್ವೀಕರಿಸಿ, ಕಷ್ಟವನ್ನೆಲ್ಲ ಮೆಟ್ಟಿನಿಂತು ಜಿಲ್ಲೆಯ ಸಾವಿರಾರು ಅಂಗವಿಕಲರಿಗೆ ನೆರವಾಗುತ್ತಿದ್ದು, ಈ ಮೂಲಕ ಅವರು ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.
ಜಗದೀಶ್ ಅವರ ಎಡಗಾಲು ಸಂಪೂರ್ಣ ನಿಷ್ಕ್ರಿಯವಾಗಿದ್ದು, ನಿಲ್ಲಲೂ ಸರಿಯಾಗಿ ನಡೆಯಲು ಆಗದ ಸ್ಥಿತಿ. ಇಷ್ಟೆಲ್ಲಾ ನ್ಯೂನ್ಯತೆ ಇದ್ದರೂ ಅವರು, ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ತನಗೆ ಅಂಗವೈಕಲ್ಯ ಇದ್ದರೂ, ಅದನ್ನು ಲೆಕ್ಕಿಸದೆ ತನ್ನಂತಹ ಸಾವಿರಾರು ಜನರ ನೆರವಿಗೆ ನಿಂತಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿಗೆ ಉಚಿತವಾಗಿ ದ್ವಿಚಕ್ರ ವಾಹನ ಚಾಲನೆ ತರಬೇತಿ ಕೊಟ್ಟಿದ್ದಾರೆ. ಬಡ ಅಂಕವಿಕಲರಿಗೆ ತಮ್ಮ ಕೈಯಿಂದ ದುಡ್ಡು ಹಾಕಿ ಲೈಸನ್ಸ್ ಕೂಡ ಮಾಡಿಸಿಕೊಟ್ಟಿದ್ದಾರೆ. ಅಂಗವಿಕಲರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ತಾವೇ ಓಡಾಡಿ ಕೊಡಿಸುತ್ತಾರೆ.
ಕೇವಲ ಸಮಾಜಸೇವೆಗಷ್ಟೇ ಜಗದೀಶ್ ಸೀಮಿತವಾಗಿಲ್ಲ. ಯಕ್ಷಗಾನ ಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ. ಅಂಗವಿಕಲರ ಹುಲಿವೇಷ ತಂಡ ಕಟ್ಟಿಕೊಂಡಿದ್ದಾರೆ. ಬದುಕು ಸವೆಸಲು ಐಟಿಐ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಡ್ರೈವಿಂಗ್ ಹೇಳಿಕೊಡುತ್ತಾರೆ. ಜೊತೆಗೆ ಬೇರೆಯವರಿಗೆ ಡ್ರೈವಿಂಗ್ ಕ್ಲಾಸ್ ಮಾಡಿ ಜೀವನ ಕಟ್ಟಿಕೊಂಡಿದ್ದಾರೆ ಎಂದು ಸಮಾಜ ಸೇವಕ ವಿಶು ಶೆಟ್ಟಿ ಹೇಳುತ್ತಾರೆ.
ಒಟ್ಟಿನಲ್ಲಿ ನಮ್ಮವರಿಗೆ ನಾವಾಗದಿದ್ದರೆ ನಾವು ಬದುಕಿ ಏನು ಪ್ರಯೋಜನ ಎಂಬುದು ಜಗದೀಶ್ ಪಾಲಿಸಿಯಾಗಿದೆ.