ಜೆಡಿಎಸ್ ಮೇಲಿನ ವಿರಸಕ್ಕೆ ಕಾಂಗ್ರೆಸ್‍ನಲ್ಲಿ ವೀಕ್ ಆದ ಸಿದ್ದರಾಮಯ್ಯ!

Public TV
4 Min Read
siddaramaiah

ರಾಜ್ಯ ಕಾಂಗ್ರೆಸ್‍ನ ಪ್ರಭಾವಿ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಷದೊಳಗೆ ದುರ್ಬಲರಾಗತೊಡಗಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ಪಕ್ಷದ ಹೈಕಮಾಂಡ್ ಜೊತೆಗೆ ಕಮಾಂಡ್ ಹೊಂದಿದ ಸಿದ್ದರಾಮಯ್ಯ ರಾಜ್ಯದಲ್ಲಿ ಪಕ್ಷಕ್ಕಾದ ಹಿನ್ನಡೆಯ ನಂತರ ಅಕ್ಷರಶಃ ವೀಕ್ ಆಗಿದ್ದಾರೆ. ರಾಜ್ಯ ಕಾಂಗ್ರೆಸ್ ವಿಚಾರದಲ್ಲಿ ಹೈಕಮಾಂಡ್ ಏನೇ ನಿರ್ಧಾರ ಮಾಡುವ ಮೊದಲು ಸಿದ್ದು ಮಾತಿಗೆ ಹೆಚ್ಚು ಮನ್ನಣೆ ನೀಡುತ್ತಿತ್ತು. ತಮಗೆ ಬೇಕಾದ ಹಾಗೆ ಕೋಟೆ ಕಟ್ಟಿಕೊಳ್ಳಲು ಇದನ್ನು ಸಿದ್ದರಾಮಯ್ಯ ಬಳಸಿಕೊಂಡಿದ್ದೂ ಉಂಟು. ತನ್ನ ಆಪ್ತರು, ಬಳಗವನ್ನೇ ಹೆಚ್ಚು ಮುನ್ನೆಲೆಗೆ ತರಲು, ತಮ್ಮ ಮೂಗಿನ ನೇರಕ್ಕೆ ಸೂತ್ರ ಹೆಣೆಯುತ್ತಿದ್ದ ಅವರು ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದರು.

SIDDU SONIA GANDHI SIDDARAMAIAH CONGRESS DELHI HIGH COMMOND KPCC

ಟಿಕೆಟ್ ಹಂಚಿಕೆ, ಪರಿಷತ್‍ಗೆ ಆಯ್ಕೆ, ನಿಗಮ ಮಂಡಳಿ ನಾಮನಿರ್ದೇಶನ, ಪಕ್ಷದ ಪದಾಧಿಕಾರಿಗಳ ಆಯ್ಕೆ ಮೊದಲಾದ ಎಲ್ಲಾ ಪ್ರಕ್ರಿಯೆಗಳಲ್ಲಿ ಸಿದ್ದು ಮೇಲುಗೈ ಸಾಧಿಸುತ್ತಿದ್ದರು. ಪಕ್ಷದೊಳಗಿನ ಎದುರಾಳಿಗಳನ್ನು ಅಕ್ಷರಶಃ ಮೂಲೆಗುಂಪು ಮಾಡುವಲ್ಲಿ ಅವರು ಯಶಸ್ವಿಯಾಗಿದ್ದರು. ಆದರೆ 2018ರ ವಿಧಾನಸಭೆ ಚುನಾವಣೆ ಸಿದ್ದರಾಮಯ್ಯ ಅವರ ಏಕಚಕ್ರಾಧಿಪತ್ಯವನ್ನು ಮುರಿಯಿತು ಎಂದೇ ಹೇಳಬೇಕು. ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಿದ್ದು, ತಮ್ಮ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಅತಂತ್ರ ಸ್ಥಿತಿ ನಿರ್ಮಾಣವಾದಾಗ ರಾಜಕೀಯ ಎದುರಾಳಿ ಜೆಡಿಎಸ್ ಕುಟುಂಬದ ಮುಂದೆ ಕೈಕಟ್ಟಿ ನಿಲ್ಲುವಂತಾಗಿದ್ದು ಇತಿಹಾಸ. ಒಲ್ಲದ ಮನಸ್ಸಿನಿಂದ ಜೆಡಿಎಸ್ ಮೈತ್ರಿ, ಸಮನ್ವಯ ಸಮಿತಿ ನೇತೃತ್ವ ವಹಿಸಿ ಸರ್ಕಾರ ನಿಯಂತ್ರಿಸಲು ನೋಡಿದ್ದು, ಜೆಡಿಎಸ್ ಅಧಿಕಾರ ಕೊನೆಗಾಣಿಸಲು ಒಳಗೊಳಗೇ ತಂತ್ರ ರೂಪಿಸಿದ್ದು ಗುಟ್ಟಾಗಿ ಉಳಿದಿಲ್ಲ. ತಮ್ಮ ಬೆಂಬಲಿಗರನ್ನೇ ಜೆಡಿಎಸ್ ವಿರುದ್ಧ ಎತ್ತಿಕಟ್ಟಿದ್ದು, ಆ ಮೂಲಕ ಸರ್ಕಾರ ಪತನಕ್ಕೆ ಕಾರಣವಾಗಿದ್ದು ಕೂಡಾ ಹೌದು.

siddu rahul F

ಬಿಜೆಪಿಯನ್ನು ಅಧಿಕಾರದಿಂದ ದೂರ ಉಳಿಸಬೇಕೆಂಬ ಒಂದೇ ಕಾರಣಕ್ಕೆ ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಪಕ್ಷದ ಹೈಕಮಾಂಡ್ ಜೆಡಿಎಸ್ ಜೊತೆ ಸರ್ಕಾರ ರಚಿಸಲು ನಿರ್ಧರಿಸಿತ್ತು. ಅದನ್ನು ಸರಿಯಾಗಿ ನಿರ್ವಹಿಸಬೇಕಾದ ಸಿದ್ದರಾಮಯ್ಯ ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸುತ್ತಾ ಸಮನ್ವಯತೆ ಸಾಧಿಸುವ ಬದಲು, ಕೆಡಿಸುವ ಪ್ರಯತ್ನ ಮಾಡಿದ್ದಾರೆಂಬುದೇ ಕಾಂಗ್ರೆಸ್ ಹೈಕಮಾಂಡ್ ಬಳಿಯಿರುವ ಮಾಹಿತಿ. ಇನ್ನೊಂದು ಪ್ರಮುಖ ಅಂಶ ಏನೆಂದರೆ, ತಮ್ಮ ಆಪ್ತರನ್ನೇ ಪಕ್ಷ ಬಿಡುವಂತೆ ಮಾಡಿ, ಸರ್ಕಾರ ಕೆಡವಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಪರೋಕ್ಷ ಕಾರಣರಾದರು ಎಂಬ ಹಣೆಪಟ್ಟಿ ಕೂಡಾ ಅವರ ಮೇಲೆ ಇದೆ. ಅವರು ಏನೇ ಸಮಜಾಯಿಷಿ ನೀಡಿದ್ರೂ ಒಪ್ಪುವ ಸ್ಥಿತಿಯಲ್ಲಿ ಕಾಂಗ್ರೆಸ್ ವರಿಷ್ಠರು ಇಲ್ಲ. ಹೀಗಾಗಿಯೇ ದಿನದಿಂದ ದಿನಕ್ಕೆ ಸಿದ್ದರಾಮಯ್ಯ ಹೈಕಮಾಂಡ್ ವಿಶ್ವಾಸ ಕಳೆದುಕೊಂಡಿದ್ದು.

siddu rahul

ಶಾಸಕರ ವಲಸೆಯ ಪರಿಣಾಮ ನಡೆದ ಉಪಚುನಾವಣೆ ಕೂಡಾ ಸಿದ್ದರಾಮಯ್ಯ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದಂತೂ ನಿಜ. ಯಾಕೆಂದರೆ ಹಿಂದಿನ ತಪ್ಪನ್ನು ಮರೆಮಾಚಲು ಹೈಕಮಾಂಡನ್ನು ಮೋಡಿ ಮಾಡಿದ ಅವರು, ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಿ ರಿಸ್ಕ್ ತೆಗೆದುಕೊಂಡರು. ಹಳಬರು, ಹೊಸಬರು, ಹಿರಿಯರು ಸೇರಿ ಪಕ್ಷದೊಳಗಿನ ಯಾವುದೇ ಪ್ರಭಾವಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹುಂಬತನ ತೋರಿದ ಸಿದ್ದರಾಮಯ್ಯಗೆ ಪಕ್ಷದೊಳಗಿನ ಹಿತಶತ್ರುಗಳೇ ಪಾಠ ಕಲಿಸಲು ಪಣ ತೊಟ್ಟರು. ಸೋಲು ಗೆಲುವಿನ ಕೀರ್ತಿ ಸಿದ್ದರಾಮಯ್ಯ ತೆಗೆದುಕೊಳ್ಳಲಿ ಎಂದು ಎಲ್ಲರೂ ಚುನಾವಣೆಯಿಂದ ದೂರ ಉಳಿದರು. ಫಲಿತಾಂಶ ಕಾಂಗ್ರೆಸ್ ನೆಲಕಚ್ಚುವಂತೆ ಮಾಡಿತು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಪಕ್ಷದೊಳಗಿನ ಸಿದ್ದರಾಮಯ್ಯ ವಿರೋಧಿ ಪಡೆ ಪರಿಣಾಮಕಾರಿಯಾಗಿ ಹೈಕಮಾಂಡ್‍ಗೆ ವರದಿ ಒಪ್ಪಿಸಿದರು. ಸಿದ್ದರಾಮಯ್ಯ ಹಿಂದಿನ ಹಾಗಿಲ್ಲ. ಅವರೊಬ್ಬರನ್ನೇ ನಂಬಿದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಮನವರಿಕೆ ಮಾಡಿಕೊಡುವಲ್ಲಿ ಎಲ್ಲ ವಿರೋಧಿಗಳೂ ಒಗ್ಗಟ್ಟಾಗಿ ಯಶಸ್ವಿಯಾಗಿದ್ದಾರೆ.

kpcc cm siddaramaiah

ಇದರ ಪರಿಣಾಮವೇ, ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ವೀಕ್ ಆಗುವಂತಾಯಿತು. ಪಕ್ಷದ ಸೋಲಿನ ಹೊಣೆಹೊತ್ತು ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಹೈಕಮಾಂಡ್ ಅವರು ನಿರೀಕ್ಷಿಸಿದಷ್ಟು ತಲೆಕೆಡಿಸಿಕೊಳ್ಳಲಿಲ್ಲ. ಕೆಪಿಸಿಸಿ ಅಧ್ಯಕ್ಷ ಮತ್ತು ಸಿಎಲ್‍ಪಿ ನಾಯಕನ ಆಯ್ಕೆ ಬಗ್ಗೆ ಸಿದ್ದರಾಮಯ್ಯ ಬಯಸಿದಷ್ಟು ಸುಲಭವಾಗಿ ಪ್ರಕ್ರಿಯೆ ನಡೆಸಲಿಲ್ಲ. ಸೋನಿಯಾ ಗಾಂಧಿ ಒಂದು ನಿಲುವು ತಾಳಿದರೆ, ರಾಹುಲ್ ಮತ್ತೊಂದು ರೀತಿಯಲ್ಲಿ ಯೋಚಿಸುತ್ತಿದ್ದಾರೆ ಅನ್ನೋದು ಸ್ಪಷ್ಟ.

ಕೆಪಿಸಿಸಿ ಅಧ್ಯಕ್ಷ ಗಾದಿಗೆ ತಾನು ಹೇಳಿದವರನ್ನು ನೇಮಕ ಮಾಡಬೇಕೆನ್ನುವ ಸಿದ್ದರಾಮಯ್ಯ ಬೇಡಿಕೆ ಅಷ್ಟು ಸುಲಭವಾಗಿ ಕೈಗೂಡುವಂತೆ ಕಾಣುತ್ತಿಲ್ಲ. ನನ್ನ ಬೆಂಬಲಿಗರಿಗೆ ಕೊಡದಿದ್ರೂ ಪರವಾಗಿಲ್ಲ, ಡಿಕೆಶಿವಕುಮಾರ್ ಅವರನ್ನು ನೇಮಕ ಮಾಡುವುದಕ್ಕೆ ಅಡ್ಡಗಾಲು ಹಾಕಿರುವ ಸಿದ್ದರಾಮಯ್ಯ ನಡೆ ಮೂಲ ಕಾಂಗ್ರೆಸಿಗರನ್ನು ಕೆರಳಿಸಿದೆ. ಒಂದು ವೇಳೆ ತಾನು ಹೇಳಿದವರನ್ನೇ ನೇಮಕ ಮಾಡಬೇಕೆಂಬ ಹಠಕ್ಕೆ ಹೈಕಮಾಂಡ್ ಒಪ್ಪಿದರೂ, ಇದು ಸಿದ್ದರಾಮಯ್ಯ ಪಾಲಿಗೆ ಕೊನೆಯ ಅವಕಾಶವಾಗುವುದಂತೂ ನಿಜ. ಮತ್ತೆ ಸಿದ್ದರಾಮಯ್ಯ ಚಕ್ರಾಧಿಪತ್ಯವನ್ನು ಮುರಿಯಲು ನಿಂತಿರುವ ವಿರೋಧಿ ಪಡೆ ತೊಡೆ ತಟ್ಟಿ ಸವಾಲು ಹಾಕಿ ನಿಲ್ಲುವುದಂತೂ ಖಂಡಿತ.

karnataka govt formation 759

ಮತ್ತೊಂದು ಕಡೆ ವಿರೋಧ ಪಕ್ಷ ನಾಯಕನ ಹುದ್ದೆಯನ್ನು ಉಳಿಸಿಕೊಳ್ಳಲು ಸಿದ್ದರಾಮಯ್ಯ ಹೆಣಗಾಡುತ್ತಿದ್ದಾರೆ. ಕಾರಣ, ಸೋನಿಯಾ ಗಾಂಧಿ ಅವರನ್ನು ಭೇಟಿಯಾದಾಗ ಅವರಿಂದ ಬಂದ ಪ್ರತಿಕ್ರಿಯೆ ಸಿದ್ದರಾಮಯ್ಯ ಅವರನ್ನು ಅಕ್ಷರಶಃ ಕಂಗಾಲಾಗಿಸಿದೆ. ಸಿಎಲ್‍ಪಿ ನಾಯಕ ಮತ್ತು ವಿರೋಧ ಪಕ್ಷ ನಾಯಕ ಹುದ್ದೆ ಪ್ರತ್ಯೇಕಿಸುವ ಮಾತನಾಡಿರುವುದು ಅಚ್ಚರಿ ಮೂಡಿಸಿದೆ. ಹುದ್ದೆ ಪ್ರತ್ಯೇಕಿಸಿದರೆ ಸಿದ್ದರಾಮಯ್ಯ ಮುಂದುವರಿಯುವ ಸಾಧ್ಯತೆ ಕಡಿಮೆ. ಹಾಗೊಂದು ವೇಳೆ ಹಾಗಾದರೂ ಪಕ್ಷದೊಳಗಿನ ಅಧಿಕಾರಕ್ಕೆ ಕತ್ತರಿ ಖಂಡಿತ.

ಒಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ಕಾಂಗ್ರೆಸ್‍ನಲ್ಲಿ ಏಕಾಧಿಪತ್ಯ ಮೆರೆದು ಪ್ರಭಾವಿ ಎನಿಸಿಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹಿಡಿತ ಸಡಿಲವಾಗುತ್ತಿರುವುದಂತೂ ಸತ್ಯ. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಮತ್ತು ವಿರೋಧ ಪಕ್ಷ ನಾಯಕನ ನೇಮಕ ಇವೆಲ್ಲವೂ ಸಿದ್ದರಾಮಯ್ಯ ಭವಿಷ್ಯವನ್ನು ನಿರ್ಧರಿಸಲಿದೆ. ಸಿದ್ದು ವೀಕ್ ಆಗ್ತಾರಾ..? ಮತ್ತೆ ಪಕ್ಷದೊಳಗೆ ಹಿಡಿತ ಸಾಧಿಸಲು ಯಶಸ್ವಿಯಾಗುತ್ತಾರಾ ಅನ್ನೋದೇ ಸದ್ಯದ ಕುತೂಹಲ.

Share This Article
Leave a Comment

Leave a Reply

Your email address will not be published. Required fields are marked *