ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯ ಆಸೆಯನ್ನು ಈಡೇರಿಸಿದ್ದಾರೆ.
ರತನ್, ದರ್ಶನ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಚಿಕ್ಕವಯಸ್ಸಿನಲ್ಲೇ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ದರ್ಶನ್ ಅವರನ್ನು ನೋಡುವುದು ರತನ್‍ನ ಬಹುದಿನದ ಆಸೆ ಆಗಿತ್ತು. ಒಂದೇ ಒಂದು ಬಾರಿ ದರ್ಶನ್ ಅವರನ್ನು ನೋಡಬೇಕೆಂದು ರತನ್ ಹಂಬಲಿಸುತ್ತಿದ್ದನು.
ಈ ವಿಷಯ ತಿಳಿದ ದರ್ಶನ್, ರತನ್ ಕುಟುಂಬವನ್ನು ಹಾಸನದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಬಳಿಕ ದರ್ಶನ್ ತಮ್ಮ ನಿವಾಸದಲ್ಲೇ ರತನ್ ಹಾಗೂ ಅವರ ಕುಟುಂಬದವರ ಜೊತೆ ಕಾಲ ಕಳೆದಿದ್ದಾರೆ. ದರ್ಶನ್ ಅವರನ್ನು ಭೇಟಿ ಆಗುತ್ತಿದ್ದಂತೆ ರತನ್ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾನೆ.
ರತನ್ ಅವರ ತಂದೆ ಆಟೋ ಚಾಲಕರಾಗಿದ್ದು, ತಮ್ಮ ಆಟೋ ಮೇಲೆ ದರ್ಶನ್ ಅವರ ಫೋಟೋ ಹಾಕಿಸಿಕೊಂಡಿದ್ದಾರೆ. ಸದ್ಯ ದರ್ಶನ್, ರತನ್ ಕುಟುಂಬದ ಜೊತೆ ಕಾಲ ಕಳೆದು ಆತನಿಗೆ ಹಾಗೂ ಆತನ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ದರ್ಶನ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ದರ್ಶನ್ ತಮ್ಮ ಪುಟ್ಟ ಅಭಿಮಾನಿಯ ಭೇಟಿ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ ದರ್ಶನ್, ರತನ್‍ನನ್ನು ಭೇಟಿ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಫೋಟೋ ನೋಡಿ ಕೆಲವರು ದರ್ಶನ್ ಅವರ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.