ಇನ್ನೂ 10 ಜನ್ಮ ಬಂದ್ರೂ ಎಚ್‍ಡಿಕೆ ಸಿಎಂ ಆಗಲ್ಲ: ಸಚಿವ ಈಶ್ವರಪ್ಪ ಲೇವಡಿ

Public TV
3 Min Read
K. S. Eshwarappa HDK

ಶಿವಮೊಗ್ಗ: ಮಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಕೆಲ ವಿಡಿಯೋ ತುಣುಕುಗಳನ್ನು ಬಿಡುಗಡೆ ಮಾಡಿದ್ದಾರೆ. ಜೆಡಿಎಸ್ ಪಕ್ಷ ಇನ್ನು ಬದುಕಿದೆ, ರಾಜಕೀಯದಲ್ಲಿ ಇದ್ದೀನಿ ಎಂದು ತೋರಿಸುವ ಸಲುವಾಗಿ ಈ ವಿಡಿಯೋಗಳನ್ನು ಅವರು ಬಿಡುಗಡೆ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಸಚಿವ ಸಚಿವ ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದರು. ಅವರು ಎಷ್ಟೇ ವಿಡಿಯೋ ರಿಲೀಸ್ ಮಾಡಿದರೂ, ಇನ್ನೂ ಹತ್ತು ಜನ್ಮ ಬಂದರೂ ಮತ್ತೆ ಮುಖ್ಯಮಂತ್ರಿಗಳಾಗಲು ಆಗುವುದಿಲ್ಲ ಎಂದರು.

MNG 3 1

ಜೆಡಿಎಸ್ ಪಕ್ಷದವರು ಅಲ್ಲೊಂದು, ಇಲ್ಲೊಂದು ಶಾಸಕರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಸಹ ಬಿಜೆಪಿ ಸೇರಲಿದ್ದಾರೆ. ಅವರ ಪಕ್ಷ ಜೀವಂತವಾಗಿದೆ ಎಂದು ತೋರಿಸಲು ವಿಡಿಯೋ ರಿಲೀಸ್ ಮಾಡಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ವಿನಾಃ ಕಾರಣ ಆರೋಪ ಮಾಡುತ್ತಿದ್ದಾರೆ. ಗೂಂಡಾಗಳು ಮಂಗಳೂರಿನಲ್ಲಿ ಸಂಚು ನಡೆಸಿ ಗಲಭೆ ನಡೆಸಿದರು ಎಂಬುದು ಎಲ್ಲಾ ಮಾಧ್ಯಮಗಳಲ್ಲಿ ಬಂದಿದೆ. ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ಬಳಸಿದ್ದನ್ನು ಕುಮಾರಸ್ವಾಮಿ ನಂಬುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ ರಾಜ್ಯದ ಜನ ಮಾತ್ರ ಈ ಘಟನೆಯನ್ನು ನೋಡಿದ್ದಾರೆ ಎಂದರು.

ಮಂಗಳೂರಿನಲ್ಲಿ ವ್ಯವಸ್ಥಿತ ಸಂಚು ನಡೆಸಿ ಗಲಭೆ ನಡೆಸಿದ ಕುತಂತ್ರಿಗಳ ಬಗ್ಗೆ ಎಚ್‍ಡಿಕೆ ಮಾತನಾಡುತ್ತಿದ್ದಾರೆ. ಈ ಕುತಂತ್ರ ರಾಜಕಾರಣವನ್ನು ರಾಜ್ಯದ ಜನ ನಂಬಲ್ಲ. ನೀವು ಎಷ್ಟೇ ಆರೋಪ ಮಾಡಿದರೂ, ಆರೋಪವನ್ನು ನಾವು ಒಪ್ಪುವುದಿಲ್ಲ. ಗಲಭೆಯಲ್ಲಿ ವ್ಯವಸ್ಥಿತ ಸಂಚು ನಡೆದಿರುವ ಬಗ್ಗೆ ನ್ಯಾಯಾಂಗ ತನಿಖೆಯ ನಂತರ ತಿಳಿಯಲಿದೆ. ಆ ಬಳಿಕ ಗಲಭೆಯಲ್ಲಿ ಇನ್ನು ಯಾರು ಇದ್ದಾರೆ ಎಂದು ಬಹಿರಂಗಗೊಳ್ಳಲಿದೆ ಎಂದು ತಿಳಿಸಿದರು.

SMG KS ESHWARAPPA

ಗ್ರಾಮೀಣ ಸಮಸ್ಯೆ ಗಮನಕ್ಕೆ ತನ್ನಿ: ನಗರದ ರಂಗಾಯಣ ಸಭಾಂಗಣದಲ್ಲಿ ಪಂಚಾಯತ್‍ರಾಜ್ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಯೋಜನೆಗಳ ಅನುಷ್ಟಾನದಲ್ಲಿನ ತೊಂದರೆಗಳ ಬಗ್ಗೆ ನೇರವಾಗಿ ತಮ್ಮ ಗಮನಕ್ಕೆ ತರುವಂತೆ ತಿಳಿಸಿದರು.

ರೈತರ ಅಭಿವೃದ್ಧಿಯಾದರೆ ಮಾತ್ರ ಹಳ್ಳಿಗಳ ಅಭಿವೃದ್ಧಿಯಾಗಲು ಸಾಧ್ಯ. ಹಳ್ಳಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುವುದು. ಗ್ರಾಮೀಣ ಅಭಿವೃದ್ಧಿ ಕಾರ್ಯಗಳ ಅನುಷ್ಟಾನದಲ್ಲಿ ಪಂಚಾಯತ್ ರಾಜ್ ಅಧಿಕಾರಿಗಳ ಪಾತ್ರ ಬಹಳ ಪ್ರಮುಖವಾದುದು. ಸರ್ಕಾರದ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವಲ್ಲಿ ಪಿಡಿಒಗಳು ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು. ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ನೇರವಾಗಿ ಜನಪ್ರತಿನಿಧಿಗಳ ಗಮನಕ್ಕೆ ತಂದು ಸರಿಪಡಿಸಬೇಕು. ಪಿಡಿಒಗಳ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.

MNG 12

ಎಲ್ಲಾ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಜಿಲ್ಲೆಯ 271 ಗ್ರಾಮ ಪಂಚಾಯತ್‍ಗಳ ಪೈಕಿ ಕೇವಲ 19 ಪಂಚಾಯತ್ ವ್ಯಾಪ್ತಿಯಲ್ಲಿ ವಿಲೇವಾರಿ ಘಟಕಕ್ಕೆ ಜಮೀನು ಗುರುತಿಸಲಾಗಿದೆ. ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ಜಮೀನು ಗುರುತಿಸಿ ಘಟಕವನ್ನು ಆದಷ್ಟು ಬೇಗನೆ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಗ್ರಾಮೀಣ ಭಾಗದಲ್ಲಿ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಬಗ್ಗೆ ಪ್ರತಿ ಗ್ರಾಮ ಪಂಚಾಯತ್ ಹೊರಗೆ ಬೋರ್ಡ್ ಹಾಕಿ ಮಾಹಿತಿ ಪ್ರಕಟಿಸಬೇಕು. ಹೊಸದಾಗಿ ಘಟಕ ಅಗತ್ಯ ಇರುವ ಕಡೆಗಳಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಬಜೆಟ್‍ನಲ್ಲಿ ಶೌಚಾಲಯ ನಿರ್ಮಾಣದ ಸಹಾಯಧನವನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು. ಇದೇ ರೀತಿ ಸಾಮೂಹಿಕ ಶೌಚಾಲಯಗಳ ನಿರ್ವಹಣೆಗೂ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಉದ್ಯೋಗ ಖಾತ್ರಿ ಯೋಜನೆ ಬಾಕಿ ಮೊತ್ತ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸದಸ್ಯ ವೀರಭದ್ರಪ್ಪ ಪೂಜಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಪಿಡಿಒ ಸಂಘದ ಜಿಲ್ಲಾಧ್ಯಕ್ಷ ಶ್ರೀರಾಮ್, ಕೇಶವ ಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *