ಚಿತ್ರದುರ್ಗ: ಸಚಿವ ಶ್ರೀರಾಮುಲುಗೆ ಮಂತ್ರಿಗಿರಿ ನಿಭಾಯಿಸಲು ಬರಲ್ಲ. ಇಲ್ಲಿಗೆ ಬಿಲ್ಡಪ್ ಕೊಡಲು ಬರುತ್ತಾನೆ. ಅವನ ಬುಡುಬುಡುಕೆ ಮಾತುಗಳಿಗೆ ಇಲ್ಲಿ ಯಾರೂ ಹೆದರಲ್ಲ ಎಂದು ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಏಕವಚನದದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆ ವೇಳೆ ಬಿಜೆಪಿ ಟಿಕೆಟ್ ಪಡೆಯುವ ವಿಚಾರದಲ್ಲಿ ಆರಂಭವಾದ ಸಚಿವ ಶ್ರೀರಾಮುಲು ಹಾಗೂ ತಿಪ್ಪೇಸ್ವಾಮಿ ನಡುವಿನ ವಾಕ್ಸಮರ, ವಿಧಾನಸಭಾ ಚುನಾವಣೆ ಮುಗಿದು ಹಲವು ವರ್ಷಗಳೇ ಕಳೆದಿದ್ದರು ಸಹ ಇವರ ಸಮರ ಮಾತ್ರ ನಿಲ್ಲೋ ಲಕ್ಷಣಗಳು ಕಾಣ್ತಿಲ್ಲ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಸಚಿವ ಶ್ರೀರಾಮುಲು ಸ್ವಕ್ಷೇತ್ರ ಮೊಳಕಾಲ್ಮೂರಿನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಹೀಗಾಗಿ ಆಕ್ರೋಶಗೊಂಡಿರೋ ತಿಪ್ಪೇಸ್ವಾಮಿಯವರು, ಆ ಕಾಮಗಾರಿಗಳಿಗೆ ನಾನು ಶಂಕು ಸ್ಥಾಪನೆ ಮಾಡಿದ್ದು, ನಾನು ಶಾಸಕನಾಗಿದ್ದಾಗ ನಿರ್ಮಿಸಿದ್ದ ಕಟ್ಟಡಗಳನ್ನು ಉದ್ಘಾಟನೆ ಮಾಡಲು ರಾಮುಲು ಬರುತ್ತಾನೆಂದು ಆರೋಪಿಸಿದ್ದಾರೆ.
ಬಳ್ಳಾರಿಯಲ್ಲೂ ಶ್ರೀರಾಮುಲು ವರ್ಚಸ್ಸು ಬಿದ್ದು ಹೋಗಿದೆ. ಆದರೆ ತಾನೊಬ್ಬ ದೊಡ್ಡ ಲೀಡರ್ ಅಂತ ಫೋಸ್ ಕೊಡುವ ಈ ಮಹಾನುಭಾವ ನಾಯಕ ಸಮುದಾಯದ ಲೀಡರ್ ಆಗಿದ್ದಾರೆ. ಹುಣಸೂರಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಅವರನ್ನು ಗೆಲ್ಲಿಸುವ ಗಂಡಸುತನ ತೋರಬೇಕಿತ್ತು ಅಂತ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಆರೋಗ್ಯ ಸಚಿವ ಶ್ರೀ ರಾಮುಲು ಹಣ ಮಾಡಲು ಮೊಳಕಾಲ್ಮೂರು ಕ್ಷೇತ್ರದ ಶಾಸಕನಾಗಿದ್ದು, ತನ್ನೊಂದಿಗೆ 20 ಜನ ಆಪ್ತ ಸಹಾಯಕರನ್ನ ಇಟ್ಟುಕೊಂಡಿದ್ದಾನೆ. ಇಲಾಖೆಗೋರ್ವ ಪಿಎಗಳನ್ನು ನೇಮಿಸಿರುವ ಈ ಪುಣ್ಯಾತ್ಮ, ತನ್ನ ಹೊಟ್ಟೆಪಾಡಿಗಾಗಿ ದುಡ್ಡು ವಸೂಲಿ ಮಾಡಲು ಮೊಳಕಾಲ್ಮೂರಿಗೆ ಬಂದಿದ್ದಾನೆಂದು ಆರೋಪಿಸಿದ್ದಾರೆ.
ವಿಧಾನಸಭಾ ಚುನಾವಣೆ ವೇಳೆ ಮೊಳಕಾಲ್ಮೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ನೀಡುವುದಾಗಿ ಹೇಳಿ ಕೊನೆ ಕ್ಷಣದಲ್ಲಿ ಬಿಜೆಪಿಯಿಂದ ಶ್ರೀ ರಾಮುಲುಗೆ ಟಿಕೇಟ್ ನೀಡಿದ ಪರಿಣಾಮ ತೀವ್ರ ಆಕ್ರೋಶಕ್ಕೊಳಗಾಗಿದ್ದ ಮಾಜಿ ಶಾಸಕ ತಿಪ್ಪೇಸ್ವಾಮಿ ಅವರ ಬೆಂಬಲಿಗರಿಂದ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇಗುಲದ ಕಲ್ಲು ತೂರಾಟ ಹಾಗೂ ರಾಮುಲು ಮೇಲೆ ಚಪ್ಪಲಿ ಎಸೆದು ಹೆದರಿಸಿ ಟಿಕೇಟ್ ಪಡೆಯಲು ಬಾರಿ ಪ್ರಯತ್ನ ಮಾಡಿದ್ದರು.
ಆದರೆ ಈ ಗಲಭೆ ಹಾಗೂ ಸ್ಥಳೀಯರ ವಿರೋಧದ ನಡುವೆಯೂ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಲ್ಲಿ ಗೆದ್ದು ಆರೋಗ್ಯ ಸಚಿವರಾಗಿದ್ದಾರೆ. ಅಲ್ಲದೆ ಮಾಜಿ ಶಾಸಕ ತಿಪ್ಪೇಸ್ವಾಮಿ ಸಹ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋತ ಬಳಿಕ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಆದರೂ ಇವರಿಬ್ಬರ ನಡುವಿನ ದ್ವೇಷ ಮಾತ್ರ ಇನ್ನೂ ಶಮನವಾಗದೇ ಪರಸ್ಪರ ಆರೋಪ, ಪ್ರತ್ಯಾರೋಪ ಮುಂದುವರಿಸಿದ್ದಾರೆ.