ಬಾಗಲಕೋಟೆ: ಹೌದ ಹುಲಿಯಾ ಭಾರೀ ವೈರಲ್ ಆಗಿದೆ. ಈಗ ಬನಶಂಕರಿ ಜಾತ್ರೆಯಲ್ಲೂ ಹೌದ ಹುಲಿಯಾ ನಾಟಕ ಹಾಕಿದ್ದಾರೆ. ನೀವೆಲ್ರೂ ಹೌದ ಹುಲಿಯಾ ನೋಡಿ ಖುಷಿಪಡಿ ಎಂದು ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ ಕಾಳಿದಾಸ ಉತ್ಸವದಲ್ಲಿ ಸಿದ್ದರಾಮಯ್ಯ ಭಾಷಣ ಪ್ರಾರಂಭಿಸುತ್ತಿದ್ದಂತೆ ಹೌದ ಹುಲಿಯಾ ಎಂಬ ಘೋಷಣೆ ಮೊಳಗಿತು. ಈ ವೇಳೆ ಹೌದ ಹುಲಿಯಾ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಏನಪ್ಪ ಹೌದ ಹುಲಿಯಾ ಭಾರೀ ಪಾಪ್ಯುಲರ್ ಆಗಿದೆಯಲ್ಲ ಎಂದು ಹೇಳಿ ಮುಂದಿನ ಕಥೆ ಹೇಳಿದರು.
ಅಥಣಿ ಉಪಚುನಾವಣೆಯಲ್ಲಿ ಅವನು ಹುಲಿಯಾ ಅಂದ. ಅವನು ಕುಡಿದಿದ್ದಾನೆ ಕೂತ್ಕೋ ಎಂದು ಹೇಳಿದ್ದೆ. ಪೊಲೀಸರು ಹೊರ ಕಳಿಸಿದ್ದರು. ಹೊರಗೆ ನಿಂತು ನಾನು ಹೋಗುವಾಗ ಕೈಕುಲಕಿ ನಾನು ನಿಮ್ಮ ಅಭಿಮಾನಿ ಅಂದ. ಹಾಗಾಗಿ ನಾಟಕದಲ್ಲಿ ನನ್ನ ಪಾತ್ರನೂ ಇರಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದಲ್ಲದೇ ನನಗೂ ನಾಟಕ ನೋಡಬೇಕು ಎಂದು ಆಸೆ. ನಾನು ನಾಳೆ ಇರಲ್ಲ ಎಂದು ಹೇಳಿದರು.
ಸರ್ಕಾರ ಒಂದೇ ಎಲ್ಲರಿಗೂ ಶಿಕ್ಷಣ ಕೊಡಲು ಆಗಲ್ಲ. ಅನೇಕ ಖಾಸಗಿ ಸಂಸ್ಥೆಗಳು ಶಿಕ್ಷಣ ಕೊಡುತ್ತಿವೆ. ಶಿಕ್ಷಣ ಕೊಡುವುದರಲ್ಲಿ ತಾರತಮ್ಯ ಇರಬಾರದು. ಸಮಾನ ಜ್ಞಾನ ಪಡೆಯಲು ಸಾಧ್ಯ. ಶಿಕ್ಷಣದಿಂದ ಸ್ವಾಭಿಮಾನ ಬರುತ್ತದೆ. ಸ್ವಾಭಿಮಾನ ಬಂದಾಗ ಗುಲಾಮಗಿರಿಯಿಂದ ಹೊರಬರಲು ಸಾಧ್ಯ. ಮೇಲ್ವರ್ಗ, ಶ್ರೀಮಂತರು ಕಂಡ ತಕ್ಷಣ ನಮಸ್ಕಾರ ಬುದ್ದಿ ಎಂದು ಹೇಳುತ್ತೇವೆ. ಶೂದ್ರ ಜಾತಿಯವರು ನಮಗಿಂತ ಕೆಳಗಿನವರು ಕಂಡಾಗ ಏನೋ, ಏನ್ಲಾ ಎಂದು ಹೇಳುತ್ತೇವೆ. ಇದು ಗುಲಾಮಗಿರಿಗೆ ಸಾಕ್ಷಿ. ಮಾರ್ಕೆಟ್ ನಲ್ಲಿ ಡಿಮ್ಯಾಂಡ್ ಇರುವ ಶಿಕ್ಷಣ ಕೊಡಬೇಕೇ ಎಂದು ಪ್ರಶ್ನಿಸಿದರು.
ಅಲ್ಲದೆ ರಾಜಕಾರಣಿಗಳು ಜನಸೇವೆ ಮಾಡುತ್ತೇವೆ ಎಂದು ಬರುತ್ತಾರೆ. ಕಾಯ್ದೆ, ಕಾನೂನು ಜನರಿಗೆ ತರ್ತೆವಿ. ಅದನ್ನು ಪ್ರಾಮಾಣಿಕವಾಗಿ ಅನುಷ್ಠಾನ ತರುವುದು ಅಧಿಕಾರಿಗಳು. ಅದನ್ನು ಬಹಳ ಪ್ರಮಾಣಿಕತೆಯಿಂದ ಮಾಡಬೇಕು ಎಂದು ಸನ್ಮಾನಿತ ಕೆಎಎಸ್ ಪಾಸ್ ಮಾಡಿದವರಿಗೆ ಸಿದ್ದರಾಮಯ್ಯ ಸಲಹೆ ನೀಡಿದರು.