ಮುಂಬೈ: ಕಳೆದ 9 ದಿನಗಳ ಹಿಂದೆ ಮೂರು ಪ್ರತ್ಯೇಕ ಸ್ಥಳದಲ್ಲಿ ದೊರೆತೆ ಮಹಿಳೆಯ ಶವದ ಭಾಗಗಳ ಪ್ರಕರಣವನ್ನು ಭೇದಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಕೊಲೆಯಾದ ಮಹಿಳೆಯ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿಯನ್ನೇ ಕೊಂದ ಪಾಪಿ ಮಗನನ್ನು ಸೊಹೈಲ್ ಶೇಖ್ ಎಂದು ಗುರುತಿಸಲಾಗಿದೆ. ದಿನ ಕುಡಿದು ತಾಯಿಯ ಜೊತೆ ಜಗಳ ಮಾಡುತ್ತಿದ್ದ ಶೇಖ್ ಕುಡಿದ ಮತ್ತಿನಲ್ಲಿ ತಾಯಿಯನ್ನು ಕೊಲೆ ಮಾಡಿದ್ದಾನೆ.
ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಮಗ ಕೆಲಸಕ್ಕೆ ಹೋಗದೆ ದಿನ ಕುಡಿದ ಬರುತ್ತಿದ್ದ ಕಾರಣಕ್ಕೆ ತಾಯಿ ದಿನ ಮಗನ ಜೊತೆ ಜಗಳವಾಡುತ್ತಿದ್ದಳು. ಹೀಗಿರುವಾಗ ಡಿಸೆಂಬರ್ 28 ರಂದು ತುಂಬಾ ಕುಡಿದು ಬಂದಿದ್ದ ಶೇಖ್ ಮತ್ತು ಆತನ ತಾಯಿ ನಡುವೆ ಜಗಳವಾಗಿದೆ. ಹೀಗೆ ಮಾತಿಗೆ ಮಾತು ಬೆಳೆದು ಕುಡಿದ ನಶೆಯಲ್ಲಿದ್ದ ಶೇಖ್ ತನ್ನ ತಾಯಿಯನ್ನು ಕತ್ತು ಹಿಸುಕಿ ಕೊಲೆಮಾಡಿದ್ದಾನೆ.
ಕೊಲೆ ಮಾಡುವ ಸಮಯದಲ್ಲಿ ಕುಡಿದ ನಶೆಯಲ್ಲಿದ್ದ ಶೇಖ್‍ಗೆ ತಾನು ಕೊಲೆ ಮಾಡಿರುವುದು ಗೊತ್ತಾಗಿಲ್ಲ. ಆದರೆ ಡಿಸೆಂಬರ್ 29ರ ಬೆಳಗ್ಗೆ ತಿಳಿದಿದೆ. ಆಗ ಎದ್ದು ದರ್ಗಾಗೆ ಹೋಗಿ ಬಂದ ಶೇಖ್, ಟಿವಿ ಕ್ರೈಮ್ ಕಾರ್ಯಕ್ರಮದಲ್ಲಿ ನೋಡಿದ ರೀತಿಯಲ್ಲಿ ತಾಯಿಯ ಮೃತ ದೇಹವನ್ನು ಮೂರು ಭಾಗಗಳಾಗಿ ಮಾಡಿ, ಅದನ್ನು ಪ್ರತ್ಯೇಕ ಮೂರು ಜಾಗದಲ್ಲಿ ಎಸೆದು ಬಂದಿದ್ದಾನೆ.
ಹೀಗೆ ಶೇಖ್ ಎಸೆದು ಬಂದ ಶವದ ಭಾಗಗಳು ಡಿಸೆಂಬರ್ 30 ರಂದು ವಿದ್ಯಾವಿಹಾರ್ ಪ್ರದೇಶದ ಕಿರೋರ್ ರಸ್ತೆಯಲ್ಲಿ ತಲೆ ಇಲ್ಲದ ಮುಂಡ ಪತ್ತೆಯಾಗುತ್ತದೆ. ನಂತರ ಕತ್ತರಿಸಿದ ಎರಡು ಕಾಲುಗಳು ಘಟ್ಕೋಪರ್ ನ ಡಸ್ಟ್ ಬಿನ್‍ನಲ್ಲಿ ಡಿಸೆಂಬರ್ 31 ರಂದು ಪತ್ತೆಯಾಗಿದ್ದು, ಜನವರಿ 4 ರಂದು ಸಂತಕ್ರೂಜ್-ಚೆಂಬೂರ್ ಲಿಂಕ್ ರಸ್ತೆಯಲ್ಲಿರುವ ಸೇತುವೆಯ ಕೆಳಗೆ ಕತ್ತರಿಸಿದ ತಲೆ ಪತ್ತೆಯಾಗಿರುತ್ತದೆ.
ಈ ಪ್ರಕರಣವನ್ನು ಬೆನ್ನತ್ತಿದ ಪೊಲೀಸರು, ಶವದ ಭಾಗಗಳು ದೊರೆತ ಮೂರು ಸ್ಥಳದಲ್ಲೂ ಸೂಹೈಲ್ ಬೈಕ್ ನಿಂತಿರುವುದು ಕಂಡು ಬರುತ್ತದೆ. ಇದರಿಂದ ಅನುಮಾನಗೊಂಡ ಪೊಲೀಸರು, ಸೂಹೈಲ್ ಶೇಖ್ ಅನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡುತ್ತಾರೆ. ಮೊದಲಿಗೆ ಒಪ್ಪಿಕೊಳ್ಳದ ಶೇಖ್ ವಿಚಾರಣೆ ತೀವ್ರಗೊಂಡಾಗ ನಾನೇ ಕುಡಿದ ಮತ್ತಿನಲ್ಲಿ ತನ್ನ ತಾಯಿಯನ್ನು ಕೊಂದೆ ಎಂದು ಒಪ್ಪಿಕೊಂಡಿದ್ದಾನೆ.
ಈ ಸಂಬಂಧ ಆರೋಪಿ ಸೂಹೈಲ್ ಶೇಖ್ ಅನ್ನು ಅರೆಸ್ಟ್ ಮಾಡಿರುವ ಘಟ್ಕೋಪರ್ ಪೊಲೀಸರು ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.