ಕವಣಾಪುರದ ಬಸವನಿಗೆ ಬಳ್ಳಾರಿಯ ದರ್ಗಾದಲ್ಲಿ ಪೂಜೆ

Public TV
2 Min Read
rmg darga

ರಾಮನಗರ: ಇತ್ತೀಚೆಗೆ ಮಂಡ್ಯ ಜಿಲ್ಲೆಯ ಡಣ್ಣಾಯಕನಪುರ ಗ್ರಾಮದಲ್ಲಿ ಅಳುತ್ತಿದ್ದ ಮಗುವಿನ ತೊಟ್ಟಿಲು ತೂಗಿ ಮಲಗಿಸಿ ಅಚ್ಚರಿ ಮೂಡಿಸಿದ್ದ ರಾಮನಗರ ಜಿಲ್ಲೆಯ ಕವಣಾಪುರ ಗ್ರಾಮದ ದೈವ ಸ್ವರೂಪಿ ಬಸವಣ್ಣ ಇದೀಗ ಮುಸ್ಲಿಂ ಪ್ರಾರ್ಥನಾ ಮಂದಿರಕ್ಕೆ ತೆರಳಿ ಪೂಜೆ ಪಡೆಯುವ ಮೂಲಕ ವಿಸ್ಮಯವನ್ನುಂಟು ಮಾಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕಾಂತೆಬೆನ್ನೂರು ಗ್ರಾಮದ ದರ್ಗಾದಲ್ಲಿ ಬಸವಣ್ಣ ಪೂಜೆ ಸ್ವೀಕರಿಸಿದೆ. ಅದು ಕೂಡ ಪ್ರಾರ್ಥನಾ ಮಂದಿರದಲ್ಲಿ ಪೂಜೆ ಸಲ್ಲಿಸುವವರಿಂದ ಪೂಜೆ ಸ್ವೀಕರಿಸಿದ ಬಳಿಕ ದರ್ಗಾದಿಂದ ಹೊರಗೆ ಬಂದಿರುವುದು ಸಾಕಷ್ಟು ಅಚ್ಚರಿಯನ್ನುಂಟು ಮಾಡಿದೆ. ಇದನ್ನೂ ಓದಿ: ಅಳುತ್ತಿದ್ದ ಮಗುವಿನ ತೊಟ್ಟಿಲನ್ನು ಕೊಂಬಿನಿಂದ ತೂಗಿ ಮಲಗಿಸಿದ ಬಸಪ್ಪ

rmg darga 1

ಇತ್ತೀಚೆಗೆ ಬಳ್ಳಾರಿಯ ಕಾಂತೆಬೆನ್ನೂರು ಗ್ರಾಮದ ಮಹಾದೇವ ಸದ್ಗುರುಗಳ ಉತ್ಸವದಲ್ಲಿ ಪಾಲ್ಗೊಂಡಿದ್ದ ರಾಮನಗರ ತಾಲೂಕು ಕವಣಾಪುರ ಬಸವಣ್ಣ ಉತ್ಸವದ ವೇಳೆ ಗ್ರಾಮದಲ್ಲಿನ ಪ್ರತಿ ದೇವಾಲಯಗಳಿಗೂ ತೆರಳಿ ಪೂಜೆ ಸ್ವೀಕರಿಸುತ್ತಾ ಮುಂದೆ ಸಾಗುತ್ತಿತ್ತು. ಇದೇ ವೇಳೆ ದಾರಿಯಲ್ಲಿದ್ದ ಮುಸ್ಲಿಂ ಪ್ರಾರ್ಥನಾ ಮಂದಿರ ಒಳ ಪ್ರವೇಶಿಸಿದೆ. ಬಸವಣ್ಣನ ವರ್ತನೆಯಿಂದ ನೆರೆದಿದ್ದವರಿಗೆ ಕ್ಷಣಕಾಲ ಗೊಂದಲ ಮತ್ತು ವಿಚಿತ್ರ ಎನಿಸಿದೆ. ಅಲ್ಲದೇ ಎಷ್ಟೇ ಪ್ರಯತ್ನಿಸಿದ್ರು ಬಸವಣ್ಣ ಮಾತ್ರ ಹೊರಗೆ ಬಂದಿಲ್ಲ.

ಕೊನೆಗೆ ದರ್ಗಾದಲ್ಲಿ ನಿತ್ಯ ಪ್ರಾರ್ಥನೆ ಸಲ್ಲಿಸುವ ಮುಸ್ಲಿಂ ಧರ್ಮಗುರುಗಳು ಬಂದು ಮುಸ್ಲಿಂ ಪದ್ಧತಿಯಂತೆ ಪೂಜೆ ಸಲ್ಲಿಸಿದ್ದಾರೆ. ಪೂಜೆ ಪಡೆದ ಬಸವಣ್ಣ ನಂತರ ದರ್ಗಾದಿಂದ ಹೊರಗೆ ಹೊರಟಿದೆ. “ಧರ್ಮ ಬೇರೆಯಾದರೂ ದೇವರೊಬ್ಬನೆ” ಎಂಬಂತೆ ದರ್ಗಾದಲ್ಲಿ ಪೂಜೆ ಸ್ವಿಕರಿಸಿದ ವಿಸ್ಮಯ ನೋಡಿದ ಜನರು ಹರ ಹರ ಶಂಕರ ಶಂಭೋ ಮಹಾದೇವ ಎಂಬ ಜೈಕಾರ ಕೂಗಿ ಸಂಭ್ರಮಿಸಿದ್ದಾರೆ.

rmg darga 2

ರಾಮನಗರದ ಕವಣಾಪುರ ಗ್ರಾಮದಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಬಸವೇಶ್ವರ ದೇವಾಲಯದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಬಸವನ್ನು ಬಿಡಲಾಗಿತ್ತು. ಅಂದಿನಿಂದಲೂ ದೈವಿ ಸ್ವರೂಪಿ ಬಸಪ್ಪ ಎಂದೇ ಹೆಸರುವಾಸಿಯಾಗಿರುವ ಬಸವ ಹಲವು ಪವಾಡಗಳನ್ನು ಸೃಷ್ಟಿಸುತ್ತಿದೆ ಎನ್ನಲಾಗಿದೆ.

ಜಮೀನು ವ್ಯಾಜ್ಯ, ದೇವಾಲಯಕ್ಕೆ ಪೂಜಾರಿಗಳನ್ನು ಗೊತ್ತು ಮಾಡುವುದು, ಭೀತಿ ಶಂಕೆ ಪರಿಹಾರ, ಮಾಟಮಂತ್ರ ಪತ್ತೆ ಹಚ್ಚುವುದು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಜಿಲ್ಲೆಯಾದ್ಯಂತ ಹಾಗೂ ಹೊರ ಜಿಲ್ಲೆಗಳಿಗೆ ತೆರಳಿ ತನ್ನ ದೈವಿ ಶಕ್ತಿಯಿಂದ ಸಮಸ್ಯೆಗಳನ್ನು ಪರಿಹರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *