ಮಂಡ್ಯ: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ಮಂಡ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಡ್ಯ ನಗರ ಹಾಗೂ ಜಿಲ್ಲೆಯಾದ್ಯಂತ ಎಂದಿನಂತೆ ವಾಹನ ಸಂಚಾರ ಹಾಗೂ ಜನ ಜೀವನ ನಡೆಯುತ್ತಿದೆ. ಈ ಮೂಲಕ ಜಿಲ್ಲೆಯಾದ್ಯಂತ ಬಂದ್‍ಗೆ ಯಾವುದೇ ರೀತಿಯ ಬೆಂಬಲ ವ್ಯಕ್ತವಾಗಿಲ್ಲ.
ಬಂದ್ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲೂ ಸಹ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದವು. ಆದರೆ ಜಿಲ್ಲೆಯಾದ್ಯಂತ ಎಂದಿನಂತೆ ವ್ಯಾಪಾರ ವಹಿವಾಟು, ವಾಹನ ಸಂಚಾರ, ಜನ ಜೀವನ ಸುಗಮವಾಗಿ ನಡೆಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಇಂದು ಬಂದ್ ಇದ್ದರೂ ಸಹ ಮಂಡ್ಯಗೆ ಬಂದ್ ಬಿಸಿ ತಟ್ಟುವುದಿಲ್ಲ ಎಂಬ ಕಾರಣಕ್ಕೆ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಿರಲಿಲ್ಲ. ಹೀಗಾಗಿ ಶಾಲಾ-ಕಾಲೇಜುಗಳು ಸಹ ಎಂದಿನಂತೆ ತೆರೆದಿವೆ. ಕೆಎಸ್ಆರ್‌ಟಿಸಿ ಬಸ್‍ನ ನೌಕರರು ಸಹ ಬಂದ್‍ಗೆ ಬೆಂಬಲ ನೀಡಿದ್ದರು. ಆದರೂ ಬಂದ್‍ನಲ್ಲಿ ಭಾಗಿಯಾಗದೇ ಎಂದಿನಂತೆ ತಮ್ಮ ಕೆಲಸ ಮಾಡುತ್ತಿದ್ದಾರೆ.
ಮಂಡ್ಯದಲ್ಲಿ ಕರ್ನಾಟಕ ಬಂದ್ ಹಾಗೂ ಕಾವೇರಿ ಹೋರಾಟದ ಸಂದರ್ಭದಲ್ಲಿ ಮಾತ್ರ ಬಂದ್‍ಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತದೆ. ಹಿಂದೆ ಭಾರತ್ ಬಂದ್ ಆದ ಸಂದರ್ಭದಲ್ಲೂ ಸಹ ಬೆಂಬಲ ವ್ಯಕ್ತವಾಗಿರಲಿಲ್ಲ. ಅದೇ ರೀತಿ ಇಂದು ನಡೆಯುತ್ತಿರುವ ಭಾರತ್ ಬಂದ್‍ಗೆ ಪ್ರತಿಕ್ರಿಯೆ ದೊರೆತಿಲ್ಲ.