ಕೊಪ್ಪಳ: ವಿಶ್ವವಿಖ್ಯಾತ ಗವಿ ಮಠದ ಗವಿ ಸಿದ್ದೇಶ್ವರ ಶ್ರೀಗಳು ವಿದ್ಯಾರ್ಥಿಯೊಬ್ಬನ ಶೂ ಲೇಸ್ ಕಟ್ಟಿ ಸರಳತೆ ಮೆರೆದಿದ್ದಾರೆ.
ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀ ಮಠದ ವತಿಯಿಂದ ವಿನೂತನ ವೃಕ್ಷ ಸಂಕಲ್ಪ ಜಾಗೃತಿ ಅಭಿಯಾನವನ್ನು ಆಯೋಜಿಲಾಗಿತ್ತು. ಲಕ್ಷ ವೃಕ್ಷೋತ್ಸವ ಶೀರ್ಷಿಕೆಯ ದೈವ ಸಾಕ್ಷಾತ್ಕಾರಕ್ಕೆ ಲಕ್ಷ ದೀಪೋತ್ಸವ, ಪ್ರಕೃತಿ ಸಾಕ್ಷಾತ್ಕರಕ್ಕೆ ಲಕ್ಷ ವೃಕ್ಷೋತ್ಸವ ಎಂಬ ಘೋಷವಾಕ್ಯದೊಂದಿಗೆ ಕೊಪ್ಪಳದ ಸಾರ್ವಜನಿಕ ಮೈದಾನದಿಂದ ಆರಂಭವಾದ ಜಾಥಾ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನಿಲ್‍ಕುಮಾರ ಚಾಲನೆ ನೀಡಿದ್ದರು.
ಲಕ್ಷ ವೃಕ್ಷೋತ್ಸವ ಜಾಥಾ ಸಮಯದಲ್ಲಿ ಬಾಲಕನೊಬ್ಬನ ಶೂ ಲೇಸ್ ಬಿಚ್ಚಿತ್ತು. ಇದನ್ನು ಗಮಿನಿಸಿದ ಗವಿ ಸಿದ್ದೇಶ್ವರ ಶ್ರೀಗಳು, ಬಾಲಕ ಬಳಿಗೆ ಬಂದು ಶೂ ಲೇಸ್ ಕಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶ್ರೀಗಳ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ವೃಕ್ಷ ಸಂಕಲ್ಪ ಜಾಗೃತಿ ಅಭಿಯಾನದಲ್ಲಿ ವಿವಿಧ ಶಾಲೆ ಹಾಗೂ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೆರವಣಿಗೆಯು ಸಾರ್ವಜನಿಕ ಮೈದಾನದಿಂದ ಅಶೋಕ ಸರ್ಕಲ್, ಜವಾಹರ್ ರಸ್ತೆ, ಗಡಿಯಾರ ಕಂಭ, ಶಾರದಾ ಚಿತ್ರಮಂದಿರವಾಗಿ ಸಾಗಿ ಗವಿಮಠದ ಮಹಾದಾಸೋಹ ಭವನ ತಲುಪಿತು.
ಲಕ್ಷವೃಕ್ಷೋತ್ಸವ ಎಂಬ ಜಾಥಾ ನಡಿಗೆ ಕಾರ್ಯಕ್ರಮದ ನಿಮಿತ್ತ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಆಯ್ಕೆಯಾಗಿ ಪ್ರಥಮ, ದ್ವೀತಿಯ, ಹಾಗೂ ತೃತಿಯ ಸ್ಥಾನ ಪಡೆದ ಪ್ರೌಢ ಶಾಲಾ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಸಣ್ಣ ನೀರಾವರಿ ಮತ್ತು ಕೆರೆಯ ಅಭಿವೃದ್ಧಿ ಪ್ರಾಧಿಕಾರ, ಖಾಸಗಿ ಶಾಲಾ ಒಕ್ಕೂಟ ಹಾಗೂ ವಿವಿಧ ಸಂಘ ಸಂಸ್ಥೆಯ ಅಧಿಕಾರಿಗಳು, ಶಿಕ್ಷಕವೃಂದ, ಸಿಬ್ಬಂದಿವರ್ಗ ಮತ್ತು ಇತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.