ಸಿಎಎ-ಎನ್ಆರ್​ಸಿ: ಮೋದಿ, ಶಾಗೆ ‘ಮೌನ ಮತದಾರ’ರ ಭೀತಿ

Public TV
4 Min Read
Modi AmitShah

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಈಗ ದೇಶಾದ್ಯಂತ ಸಂಘರ್ಷದ ಕಿಡಿ ಹಚ್ಚಿರುವಾಗ, ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಯ್ದೆಯ ರೂವಾರಿ ಗೃಹ ಸಚಿವ ಅಮಿತ್ ಶಾ ಅವರ ವಾಸ್ತವ ಚಿಂತೆಯೇ ವಿಭಿನ್ನವಾಗಿದೆ. ಸಿಎಎ ಜಾರಿ ಸರಿಯಲ್ಲ ಎಂದು ಬಿಜೆಪಿ ವಿರೋಧಿಗಳು ಬೀದಿಗೆ ಬಂದಿದ್ದಾರೆ. ಬಹತೇಕ ಎಡ ಪಂಥೀಯ ವರ್ಗ ಕಾಯ್ದೆಯನ್ನು ವಿರೋಧಿಸಿದೆ. ವಿರೋಧದ ಮುಂಚೂಣಿಯಲ್ಲಿರುವುದು ಕಾಂಗ್ರೆಸ್ ಪಕ್ಷ, ಅದಕ್ಕೆ ಬೆಂಬಲವಾಗಿ ನಿಂತಿರುವುದು ಕಾಯ್ದೆ ಜಾರಿಯಿಂದ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಎಂಬ ಆತಂಕದಲ್ಲಿರುವ ಮುಸ್ಲಿಂ ಸಮುದಾಯ. ಅಂದ್ರೆ ಒಟ್ಟಾರೆಯಾಗಿ ಬಲಪಂಥೀಯ ವಿಚಾರಗಳನ್ನು ವಿರೋಧಿಸುವವರೆಲ್ಲಾ ಕಾಯ್ದೆಯನ್ನು ಒಪ್ಪಲು ಸಿದ್ಧರಿಲ್ಲ.

ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿರುವ ಬಿಜೆಪಿ ಮತ್ತು ಸಂಘ ಪರಿವಾರದ ಅಂಗಸಂಸ್ಥೆಗಳು, ಬಲಪಂಥೀಯ ವಿಚಾರಧಾರೆಯುಳ್ಳವರೆಲ್ಲಾ ಈ ಕಾಯ್ದೆಯನ್ನು ಬೆಂಬಲಿಸಿದ್ದಾರೆ. ಕಾಯ್ದೆಯನ್ನು ವಿರೋಧಿಸುವವರೆಲ್ಲಾ ಬೀದಿಗೆ ಬಂದು ಕೂಗಾಡುತ್ತಿದ್ದರೆ, ಕಾಯ್ದೆಯನ್ನು ಬೆಂಬಲಿಸುವವರು ಮನೆ ಮನೆಗೆ ಹೋಗಿ ಕಾಯ್ದೆಯ ಔಚಿತ್ಯವನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ. ಬೀದಿಯಲ್ಲಿ ಭಾಷಣ ಬಿಗಿದು, ಮಾಧ್ಯಮಗಳಿಂದ ಒಂದಷ್ಟು ಪ್ರಚಾರ ಪಡೆದು, ಚಪ್ಪಾಳೆ ಗಿಟ್ಟಿಸಿಕೊಳ್ಳುವುದಕ್ಕಿಂತ, ಕಾಯ್ದೆಯನ್ನು ಬೆಂಬಲಿಸುವ ಮನೆ ಮನೆ ಜಾಗೃತಿ ಕಾರ್ಯಕ್ರಮವೇ ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ ಭಾರೀ ನಿರೀಕ್ಷೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ದೊರಕುವಂತೆ ಮಾಡಿದ ನೈಜ ಮತದಾರನ ಮನವರಿಕೆಯೇ ಸೂಕ್ತ ಅಸ್ತ್ರವಾಗಬೇಕಾಗಿರುವುದು ಈಗಿನ ಅಗತ್ಯತೆ.

Anti caa 1

ಪ್ರತಿಪಕ್ಷಗಳು ಮುಸ್ಲಿಂ ಸಮುದಾಯ ಸೇರಿದಂತೆ ವಿವಿಧ ವರ್ಗಗಳ ಎಷ್ಟೇ ಪ್ರತಿರೋಧವಿದ್ದರೂ ಸಿಎಎ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರಕ್ಕೆ ಸಣ್ಣದೊಂದು ಆತಂಕವಿದೆ. ಅದು ಏನೆಂದರೆ, ಕಾಯ್ದೆ ವಿರೋಧಿಸುವವರೆಲ್ಲಾ ಸದಾ ಬಿಜೆಪಿಯ ಎಲ್ಲಾ ವಿಚಾರಗಳಿಗೆ ಪ್ರತಿರೋಧ ವ್ಯಕ್ತಪಡಿಸುತ್ತಾ ಬಂದವರೇ. ಅಲ್ಲದೇ ಬೆಂಬಲಿಸುವವರು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಪ್ರಖರ ಹಿಂದುತ್ವವಾದಿಗಳು. ಇದರಲ್ಲಿ ಯಾವುದೇ ವ್ಯತ್ಯಾಸಗಳು ಆಗಲ್ಲ ಎನ್ನುವ ಅಚಲ ವಿಶ್ವಾಸ ಮೋದಿ-ಅಮಿತ್ ಶಾ ಜೋಡಿಗೆ ಸದಾ ಇದೆ. ಹೀಗಿದ್ದರೂ ಅವರಿಗ್ಯಾಕೆ ಚಿಂತೆ ಅಂತೀರಾ..? ಅಲ್ಲೇ ಇರೋದು ಕುತೂಹಲ.

ಏನೇ ಆಗಲಿ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರಲು ಕೇವಲ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಹಿಂದುತ್ವವಾದಿಗಳ ಪಾತ್ರ ಮಾತ್ರವೇ ಅಲ್ಲ ಅನ್ನೋ ಕನಿಷ್ಠ ಪ್ರಜ್ಞೆ ಈ ಇಬ್ಬರು ನಾಯಕರಿಗೆ ಇದೆ. ಅಂದರೆ ಈ ಬಾರಿ ಮೋದಿಯವರನ್ನು ಹೆಚ್ಚಾಗಿ ಬೆಂಬಲಿಸಿದ್ದು ನ್ಯೂಟ್ರಲ್ ಮತದಾರ. ಅಂದರೆ ಯಾವುದೇ ಪಕ್ಷ-ಸಂಘಟನೆಯಲ್ಲಿ ಗುರುತಿಸಿಕೊಳ್ಳದೇ, ಎಡ-ಬಲ ಎಂಬ ಸಂಘರ್ಷದಲ್ಲಿ ಇಲ್ಲದಿರುವ ಮೌನ ಮತದಾರ. ಅವರ ನಿರೀಕ್ಷೆ ಏನಿತ್ತು ಅಂದ್ರೆ, ಈ ದೇಶದ ಸುರಕ್ಷತೆ ಮೋದಿ ಸರ್ಕಾರದಿಂದ ಮಾತ್ರ ಸಾಧ್ಯ. ನೆರೆಯ ದೇಶಗಳನ್ನು ಎದುರಿಸಿ ಬಗ್ಗು ಬಡಿಯುವ ಇಚ್ಛಾಶಕ್ತಿ ಇದೆ ಎಂಬ ನಂಬಿಕೆಯಿಂದ ಬಹುತೇಕ ದೇಶವಾಸಿಗಳು ಅಂದರೆ ನ್ಯೂಟ್ರಲ್ ಮತದಾರರು, ನಾಗರಿಕರು ಬಿಜೆಪಿಯನ್ನು ಬೆಂಬಲಿಸಿದ್ದು ವಾಸ್ತವ. ಹೀಗಿರುವಾಗ ಈಗ ಈ ‘ಮಧ್ಯ’ವರ್ಗ (ನ್ಯೂಟ್ರಲ್ ಮತದಾರ)ದ ಅಭಿಪ್ರಾಯ ಏನು ಎಂಬ ಆತಂಕಕ್ಕೆ ಒಳಗಾಗಿದ್ದಾರೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ. ತಮ್ಮನ್ನು ಬೆಂಬಲಿಸಿದ ಮತದಾರರ ಮನದಾಳ ಏನು? ಪ್ರತಿಪಕ್ಷಗಳ ವಿರೋಧಕ್ಕೆ ಅವರು ತಲೆದೂಗಿದ್ದಾರೆಯೇ? ಅವರ ಪ್ರಕಾರ ಕೇಂದ್ರದ ನಿರ್ಧಾರ ಸರಿಯೇ ತಪ್ಪೇ? ಇದನ್ನು ಅರಿಯುವ ಕಾರ್ಯಕ್ಕೆ ಕೈಹಾಕಿದೆ ಮೋದಿ-ಶಾ ಜೋಡಿ. ಅದರ ಮೊದಲ ಪ್ರಯತ್ನವೇ ಸಿಎಎ ಕುರಿತಾದ ಮನೆ ಮನೆ ಜಾಗೃತಿ.

ಸದ್ಯಕ್ಕಿರುವ ಮಾಹಿತಿಯಂತೆ ಶೇ.60-65ರಷ್ಟು ಈ ‘ಮಧ್ಯ’ವರ್ಗದ ಮತದಾರರು ಸಿಎಎ ನಿರ್ಧಾರದ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ ಎನ್ನುವುದು ಬಿಜೆಪಿ ವಲಯದ ಲೆಕ್ಕಾಚಾರ. ಕೇಂದ್ರ ಸರ್ಕಾರ ದೇಶದ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದೆ. ಮುಂದೆ ಅನುಷ್ಠಾನದ ಹಾದಿಯಲ್ಲಿ ಸರ್ಕಾರ ಯಶಸ್ಸಾಗಬಹುದು ಎಂಬುದು ಈ ಕಾಯ್ದೆಯನ್ನು ಮೌನವಾಗಿ ಬೆಂಬಲಿಸುತ್ತಿರುವ ಮಧ್ಯವರ್ಗದ ನಿರೀಕ್ಷೆ. ಆದ್ರೆ ಸಿಎಎ ತಂದಿರುವ ಔಚಿತ್ಯವನ್ನು ಪ್ರಶ್ನಿಸುತ್ತಿದೆ ಶೇ.35ರಿಂದ ಶೇ.40ರಷ್ಟಿರುವ ಮಧ್ಯಮ ವರ್ಗ ಎನ್ನುವ ಅಂಕಿ ಅಂಶ ಬಿಜೆಪಿ ಪಡಸಾಲೆಯಲ್ಲಿದೆ. ಇದುವೇ ಈಗ ಬಿಜೆಪಿ ವರಿಷ್ಠರ ನಿದ್ದೆಗೆಡಿಸಿದೆ. ಕಾಯ್ದೆಯನ್ನು ವಿರೋಧಿಸುವ ನ್ಯೂಟ್ರಲ್ ಮತದಾರರ ವಾದ ಏನೂಂದ್ರೆ, ಈ ಕಾಯ್ದೆಯನ್ನು ಇಷ್ಟೊಂದು ಅವಸರದಲ್ಲಿ ತರುವ ಅಗತ್ಯವಿತ್ತ? ದೇಶದಲ್ಲಿ ಆರ್ಥಿಕ ಸ್ಥಿತಿ ಗತಿ ಚೆನ್ನಾಗಿಲ್ಲ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ದಿನೋಪಯೋಗಿ ವಸ್ತುಗಳ ಬೆಲೆ ತಾರಕಕ್ಕೇರಿದೆ. ತೆರಿಗೆ ಹೊರೆ ಜಾಸ್ತಿಯಾಗಿದೆ. ಜಿಡಿಪಿ ದರ ಕುಸಿದಿದೆ. ಪರಿಸ್ಥಿತಿ ಹೀಗಿರುವಾಗ ಜವಾಬ್ದಾರಿಯುತ ಕೇಂದ್ರ ಸರ್ಕಾರ ಈ ಗಂಭೀರ ಸಮಸ್ಯೆಗಳನ್ನು ಗಮನಹರಿಸಿ ಬಗೆಹರಿಸಲು ಪ್ರಯತ್ನಿಸಬೇಕಿತ್ತೇ ವಿನಃ ಇಂತಹ ಅರಾಜಕತೆ ಸೃಷ್ಟಿಸಬಹುದಾದ ಕಾಯ್ದೆ ಜಾರಿಗೆ ತರಬೇಕಾದ್ದಲ್ಲ ಅನ್ನೋದು ಸಿಎಎ ವಿರೋಧಿಸುವವರ ವಾದ. ಇಂತಹ ಸಂಕಷ್ಟದ ಸಂದರ್ಭದಲ್ಲಿ ವಿವಾದಾತ್ಮಕ ಕಾಯ್ದೆ ಜಾರಿಗೆ ಮುಂದಾದರೆ ಪ್ರತಿಭಟನೆ, ಗದ್ದಲ, ಅರಾಜಕತೆ ಸೃಷ್ಟಿಯಾಗಿ ಅದು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಬಹುದು. ಇದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ಸಿಎಎ ಜಾರಿಗೆ ಮುಂದಾಗಿದ್ದೇಕೆ ಎನ್ನುವುದು ಇವರ ಪ್ರಶ್ನೆ.

ಈ ಹಿನ್ನೆಲೆಯಲ್ಲೇ ಈಗ ಬಿಜೆಪಿ ಟೀಂ ಫೀಲ್ಡಿಗೆ ಇಳಿದಿದೆ. ಕಾಯ್ದೆಯ ಅನಿವಾರ್ಯತೆ, ಔಚಿತ್ಯದ ಬಗ್ಗೆ ಮನವರಿಕೆ ಮಾಡ ತೊಡಗಿದ್ದಾರೆ. ಈ ಮೂಲಕ ತಮ್ಮನ್ನು ಬೆಂಬಲಿಸಿದ ವರ್ಗವನ್ನು ಮನವೊಲಿಸುವ ಕಾರ್ಯಕ್ಕೆ ಮುಂದಾಗಿದೆ ಕೇಸರಿ ಟೀಂ. ಈ ಕೆಲಸದಲ್ಲಿ ಬಿಜೆಪಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನೋದನ್ನು ಕಾಯಬೇಕು. ಒಟ್ಟಿನಲ್ಲಿ ಬಿಜೆಪಿಯನ್ನು ಬೆಂಬಲಿಸಿದ ‘ಮೌನ ಮತದಾರ’ ಮೋದಿ ಶಾ ಜೋಡಿಯ ನಿದ್ದೆ ಕೆಡಿಸಿರುವುದಂತೂ ನಿಜ.

Share This Article
Leave a Comment

Leave a Reply

Your email address will not be published. Required fields are marked *