ಆರ್ಥಿಕ ಸದೃಢತೆ ಸಾಧನೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ: ಜೋಶಿ

Public TV
3 Min Read
HBL 3

ಹುಬ್ಬಳ್ಳಿ: ಬರುವ ವರ್ಷಗಳಲ್ಲಿ ಭಾರತವನ್ನು 5 ಟ್ರಿಲಿಯನ್ ಅರ್ಥವ್ಯವಸ್ಥೆಯ ರಾಷ್ಟ್ರವಾಗಿ ಸಶಕ್ತಗೊಳಿಸುವುದು ಸೇರಿದಂತೆ ಅನೇಕ ಆರ್ಥಿಕ ಮತ್ತು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಸ್ಪಷ್ಟ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಕೃಷಿ ಮೇಲಿನ ಉದ್ಯೋಗ ಅವಲಂಬನೆ ಕಡಿಮೆಗೊಳಿಸಿ ಪರ್ಯಾಯ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇಂದಿನ ಸಭೆಯಲ್ಲಿ ಸಂಗ್ರಹಿಸಲಾಗಿರುವ ಬರುವ ಬುಧವಾರದ ಕೇಂದ್ರ ಸಚಿವ ಸಂಪುಟ ಸಭೆಯ ಒಳಗಾಗಿ ಕೇಂದ್ರ ಹಣಕಾಸು ಸಚಿವರಿಗೆ ತಲುಪಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಇಂದು ಕೇಂದ್ರ ಬಜೆಟ್ ಪೂರ್ವ ಪ್ರಸ್ತಾವನೆಗಳ ಕುರಿತು ಆರ್ಥಿಕ ತಜ್ಞರು ಮತ್ತು ಸಾರ್ವಜನಿಕರೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಕಳೆದ 16 ವರ್ಷಗಳಿಂದ ನಿರಂತರವಾಗಿ ಬಜೆಟ್ ಪೂರ್ವ ಸಂವಾದ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇನೆ. ಧಾರವಾಡ ಲೋಕಸಭಾ ಕ್ಷೇತ್ರದ ಮತದಾರರ ಆಶೀರ್ವಾದದಿಂದ ಕೇಂದ್ರ ಸರ್ಕಾರದ ಸಚಿವನಾಗಿ ಸಭೆ ನಡೆಸುವ ಸದಾವಕಾಶ ದೊರೆತಿದೆ. ಭಾರತವನ್ನು 5 ಟ್ರಿಲಿಯನ್ ಅರ್ಥವ್ಯವಸ್ಥೆಯ ರಾಷ್ಟ್ರವಾಗಿಸುವ ಮತ್ತು 1 ಲಕ್ಷ ಕೋಟಿ ರೂ.ಗಳನ್ನು ಬರುವ ಐದು ವರ್ಷಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿನಿಯೋಗಿಸುವ ಗುರಿ ಹೊಂದಲಾಗಿದೆ. ಬರುವ ಹತ್ತು ವರ್ಷಗಳಲ್ಲಿ ರೇಲ್ವೇ ವ್ಯವಸ್ಥೆಯ ಅಭಿವೃದ್ಧಿಗೆ 50 ಲಕ್ಷ ಕೋಟಿ ರೂ.ಬಳಸುವ ಗುರಿ ಹೊಂದಲಾಗಿದೆ ಎಂದರು.

HBL 2

ಜಿಎಸ್ ಟಿ ತೆರಿಗೆಯು ಸರಳ ಮತ್ತು ಸುಲಭ ವಿಧಾನವಾಗಿದೆ ಎಂಬುದು ಬಹುತೇಕ ಚಾರ್ಟರ್ಡ್ ಅಕೌಂಟೆಂಟ್ ಗಳ ಅಭಿಪ್ರಾಯವಾಗಿದೆ. 60 ದಿನಗಳಲ್ಲಿ ಜಿಎಸ್‍ಟಿ ಮರುಪಾವತಿ ಮಾಡಲಾಗುವುದು. ದೇಶದ ಸಮಗ್ರ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಎಲ್ಲರ ಸಲಹೆ ಪಡೆಯಲು ಈ ಸಭೆ ಆಯೋಜಿಸಲಾಗಿದೆ. ರಚನಾತ್ಮಕ ಸಲಹೆಗಳನ್ನು ಕ್ರೂಢೀಕರಿಸಿ ಕೇಂದ್ರದ ಹಣಕಾಸು ಸಚಿವರು ಮತ್ತು ಪ್ರಧಾನ ಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.

ಉದ್ಯಮಿಗಳು, ಸಾರ್ವಜನಿಕರ ಅಭಿಪ್ರಾಯಗಳು:
ಸಂವಾದದಲ್ಲಿ ಭಾಗವಹಿಸಿದ ವಿವಿಧ ಕೈಗಾರಿಕೋದ್ಯಮಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮಾತನಾಡಿ, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಅಡ್ಡಿಯಾಗಿರುವ ಅಂಶಗಳನ್ನು ಪರಿಹರಿಸಬೇಕು. ಮಂಗಳೂರು-ವಿಜಯಪುರ ರೈಲನ್ನು ಖಾಯಂಗೊಳಿಸಬೇಕು. ಹುಬ್ಬಳ್ಳಿ ರೈಲ್ವೇ ನಿಲ್ದಾಣಕ್ಕೆ ಶ್ರೀ ಸಿದ್ದಾರೂಢರ ಹೆಸರಿಡಬೇಕು. ಧಾರವಾಡ ರೇಲ್ವೇ ಸ್ಟೇಷನ್ ಹತ್ತಿರ ಕಲ್ಯಾಣ ನಗರಕ್ಕೆ ತೆರಳುವ ಮಾರ್ಗದಲ್ಲಿ ರೇಲ್ವೆ ಮೇಲ್ಸೇತುವೆ ನಿರ್ಮಿಸಬೇಕು. ತೆರಿಗೆ ನೀತಿಯ ಪರಿಷ್ಕರಣೆ, 2005 ರವರೆಗೂ ಗ್ರಾಮೀಣ ಬ್ಯಾಂಕುಗಳಿಗೆ ತೆರಿಗೆ ವಿಧಿಸುತ್ತಿರಲಿಲ್ಲ. 2005 ರ ನಂತರ ಗ್ರಾಮೀಣ ಬ್ಯಾಂಕುಗಳು ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಅಧಿಕ ತೆರಿಗೆ ಪಾವತಿಸುತ್ತಿವೆ. ಈ ವ್ಯತ್ಯಾಸ ಸರಿಪಡಿಸಬೇಕು. ಸಹಕಾರಿ ರಂಗದ ಬ್ಯಾಂಕುಗಳು ಉತ್ತೇಜನಕ್ಕೆ ಕ್ರಮಗಳನ್ನು ಅಳವಡಿಸಬೇಕು. ವಿಮಾ ವಲಯದ ಮೇಲೆ ವಿಧಿಸುತ್ತಿರುವ ಜಿಎಸ್‍ಟಿ ತೆರಿಗೆ ಕಡಿತಗೊಳಿಸಿ. ಇದೇ ಸಂದರ್ಭದಲ್ಲಿ ಪೂರ್ಣಪ್ರಜ್ಞ ಎಂಬ ಯುವ ವಿದ್ಯಾರ್ಥಿಯೊಬ್ಬ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಸಾಮಥ್ರ್ಯ ಹೆಚ್ಚಿಸಲು ಶಿಕ್ಷಣದ ಹೂಡಿಕೆಯ ಪ್ರಮಾಣ ಹೆಚ್ಚಿಸಬೇಕು. ಉನ್ನತ ಗುಣಮಟ್ಟದ ಎಂ.ಬಿ.ಎ ಮತ್ತಿತರ ವೃತ್ತಿಪರ ಸ್ನಾತಕೋತ್ತರ ಶಿಕ್ಷಣ ಸಂಸ್ಥೆಗಳು ತಲೆ ಎತ್ತಬೇಕು ಎಂದರು.

HBL 1

ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಪ್ರದೀಪ್ ಶೆಟ್ಟರ್, ಜಿಲ್ಲಾಧಿಕಾರಿ ದೀಪಾ ಚೋಳನ್, ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ ಸತೀಶ್, ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಮ್ಯಾಥ್ಯೂ, ನೈಋತ್ಯ ರೇಲ್ವೇ ವಲಯದ ಎಡಿಜಿಎಂ ಎ.ಕೆ.ಮಿಶ್ರಾ, ಅಶೋಕ್ ಗಡಾದ ಮತ್ತಿತರರು ವೇದಿಕೆಯಲ್ಲಿದ್ದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ ಸ್ವಾಗತಿಸಿದರು. ಶೇಷಗಿರಿ ಕುಲಕರ್ಣಿ ನಿರೂಪಿಸಿದರು. ಮಲ್ಲಿಕಾರ್ಜುನಗೌಡ ಪಾಟೀಲ ವಂದಿಸಿದರು. ಕೈಗಾರಿಕೋದ್ಯಮಿಗಳು, ಚಾರ್ಟರ್ಡ್ ಅಕೌಂಟೆಂಟ್‍ಗಳು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *