ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಕಾರು ದಾರಿ ಮಧ್ಯೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ರಾಮಕುಂಜ ನಿವಾಸಿ ಪ್ರವೀಣ್ ಡಿಸೋಜ ಎಂಬವರು ಬೆಂಗಳೂರಿನಿಂದ ತಮ್ಮ ಕಾರು ಚಲಾಯಿಸುತ್ತಾ ಊರಿಗೆ ಬರುತ್ತಿದ್ದರು. ಕಾರು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಡಬ ಬಳಿಯ ಕೊಡ್ಡೇಲು ಎಂಬಲ್ಲಿ ತಲುಪಿದಾಗ ಕಾರಿನ ಮುಂಭಾಗದಲ್ಲಿ ಹೊಗೆ ಆವರಿಸಿಕೊಂಡು ಬೆಂಕಿ ಹತ್ತಿದೆ.
ವಾಹನದಲ್ಲಿ ಹೊಗೆ ಬಂದಿದ್ದನ್ನು ಗಮನಿಸಿದ ಪ್ರವೀಣ್ ಕಾರಿನಿಂದ ಹೊರಗೆ ಇಳಿದಿದ್ದಾರೆ. ನಂತರ ನೋಡ ನೋಡುತ್ತಿದಂತೆ ಕಾರು ಸಂಪೂರ್ಣ ಹೊತ್ತಿ ಉರಿದು ಭಸ್ಮವಾಗಿದೆ. ಸ್ಥಳೀಯರು ಸೇರಿ ಬೆಂಕಿ ನಂದಿಸಲು ಯತ್ನಿಸಿದರೂ ಕ್ಷಣಾರ್ಧದಲ್ಲಿ ಕಾರಿಗೆ ಸಂಪೂರ್ಣವಾಗಿ ಬೆಂಕಿ ಆವರಿಸಿಕೊಂಡಿತ್ತು. ನೆಲ್ಯಾಡಿ ಹೊರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.