ನನಗೆ ಮಾಲಿಂಗ ಯಾರ್ಕರ್ ಹಾಕೋದನ್ನು ಹೇಳಿಕೊಟ್ಟಿಲ್ಲ – ಬೌಲಿಂಗ್ ಗುಟ್ಟು ಬಿಚ್ಚಿಟ್ಟ ಬುಮ್ರಾ

Public TV
2 Min Read
bumrah19032019 0

ನವದೆಹಲಿ: ಶ್ರೀಲಂಕಾದ ಯಾರ್ಕರ್ ಸ್ಪೆಶಲಿಸ್ಟ್ ಲಸಿತ್ ಮಾಲಿಂಗ ನನಗೆ ಯಾರ್ಕರ್ ಹಾಕುವುದನ್ನು ಹೇಳಿಕೊಟ್ಟಿಲ್ಲ ಎಂದು ಭಾರತದ ಯುವ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ಹೇಳಿದ್ದಾರೆ.

ಈಗ ಭಾರತದ ತಂಡದ ಬೌಲಿಂಗ್ ಸ್ಟಾರ್ ಆಗಿರುವ ಬುಮ್ರಾ ಹಾಗೂ ಮಾಲಿಂಗ ಐಪಿಎಲ್ ನಲ್ಲಿ ಒಂದೇ ತಂಡದ ಪರವಾಗಿ ಆಡುತ್ತಾರೆ. ಬುಮ್ರಾ ಅವರು ಮುಂಬೈ ಇಂಡಿಯನ್ಸ್ ಪರ ಆಡುವಾಗ ಮಾಲಿಂಗ ಅವರ ಬಳಿ ಯಾರ್ಕರ್ ಎಸೆತವನ್ನು ಮಾಡುವುದನ್ನು ಕಲಿತಿದ್ದಾರೆ. ಹಾಗಾಗಿ ಅವರು ಇಂದು ಡೆಡ್ಲಿ ಯಾರ್ಕರ್ ಗಳನ್ನು ಎಸೆಯುತ್ತಾರೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬಂದಿತ್ತು.

Bumrah Malinga IANS

ಈಗ ಈ ಗಾಳಿ ಸುದ್ದಿಗೆ ತೆರೆ ಎಳೆದಿರುವ ಬುಮ್ರಾ, ಲಸಿತ್ ಮಾಲಿಂಗ ಅವರು ನನಗೆ ಯಾರ್ಕರ್ ಎಸೆತ ಹಾಕುವುದನ್ನು ಹೇಳಿಕೊಟ್ಟಿಲ್ಲ. ನಾನು ಮತ್ತು ಅವರು ಮುಂಬೈ ಇಂಡಿಯನ್ಸ್ ಪರ ಆಡುವಾಗ ಒಂದೇ ನೆಟ್‍ನಲ್ಲಿ ಅಭ್ಯಾಸ ಮಾಡಿದ್ದೇವೆ. ಆದರೆ ಅವರು ನನಗೆ ಯಾರ್ಕರ್ ಎಸೆತವನ್ನು ಹೇಗೆ ಎಸೆಯುವುದು ಎಂಬುದರ ಬಗ್ಗೆ ಹೇಳಿಕೊಟ್ಟಿಲ್ಲ. ಬದಲಿಗೆ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಒತ್ತಡವನ್ನು ಹೇಗೆ ನಿರ್ವಹಿಸಬೇಕು ಎಂದು ಹೇಳಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿರುವ ಬುಮ್ರಾ, ನನಗೆ ಯಾರು ಯಾರ್ಕರ್ ಎಸೆತವನ್ನು ಹೇಳಿಕೊಟ್ಟಿಲ್ಲ. ಮಾಲಿಂಗ ಅವರು ನಾನು ಐಪಿಎಲ್ ಅಲ್ಲಿ ಒಂದೇ ತಂಡಕ್ಕೆ ಆಡುತ್ತೇವೆ. ಆದರೆ ಮಾಲಿಂಗ ಕೂಡ ನನಗೆ ಯಾರ್ಕರ್ ಎಸೆತದ ಬಗ್ಗೆ ಹೇಳಿಕೊಟ್ಟಿಲ್ಲ. ನಾನು ಟಿವಿ ನೋಡಿಯೇ ಬೌಲಿಂಗ್ ಮಾಡುವುದನ್ನು ಕಲಿತ್ತಿದ್ದೇನೆ. ವಿಡಿಯೋ ನೋಡಿ ಅಲ್ಲಿನ ಪ್ರತಿಕ್ರಿಯೆಯನ್ನು ಅನುಸರಿಸಿ ನಾನು ಬೌಲಿಂಗ್ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

Jasprit Bumrah

ನಾನು ಈಗಲೂ ಕೂಡ ಟಿವಿ ನೋಡಿಯೇ ಬೌಲಿಂಗ್ ಕಲಿಯುತ್ತೇನೆ. ನನಗೆ ನನ್ನದೇ ದಾರಿಯಲ್ಲಿ ಅಭ್ಯಾಸ ಮಾಡಲು ಇಷ್ಟಪಡುತ್ತೇನೆ. ನನ್ನ ಬಗ್ಗೆ ನಾನೇ ವಿಶ್ಲೇಷಣೆ ಮಾಡಲು ಪ್ರಯತ್ನಿಸುತ್ತೇನೆ. ಏಕೆಂದರೆ ಕ್ರಿಕೆಟ್ ಆಡುವಾಗ ಮೈದಾನದಲ್ಲಿ ನಾನು ಒಬ್ಬಂಟಿಯಾಗಿ ಬೌಲಿಂಗ್ ಮಾಡಬೇಕು. ಅಲ್ಲಿ ನನಗೆ ಸಹಾಯ ಮಾಡಲು ಯಾರು ಇರುವುದಿಲ್ಲ. ಹಾಗಾಗಿ ನಾನು ನನ್ನ ದಾರಿಯಲ್ಲಿ ನಾನೇ ಅಭ್ಯಾಸ ಮಾಡಿ. ನನಗೆ ನಾನೇ ಸಹಾಯ ಮಾಡಿಕೊಳ್ಳುತ್ತೇನೆ ಎಂದು ತನ್ನ ಬೌಲಿಂಗ್ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ಕೆಲವರು ಮಾಲಿಂಗ ಅವರು ನನಗೆ ಯಾರ್ಕರ್ ಮಾಡುವುದನ್ನು ಹೇಳಿಕೊಟ್ಟಿದ್ದಾರೆ ಎಂದು ಹೇಳುತ್ತಾರೆ. ಅದು ನಿಜವಲ್ಲ. ಅವರು ನನಗೆ ಮೈದಾನದಲ್ಲಿ ಏನೂ ಹೇಳಿಕೊಟ್ಟಿಲ್ಲ. ಅವರ ಬಳಿ ನಾನು ಕಲಿತಿರುವುದು ಮನಸ್ಸನ್ನು ಹೇಗೆ ನಿಯಂತ್ರಣ ಮಾಡುವುದು, ಕೋಪ ಮಾಡಿಕೊಳ್ಳದೇ ಹೇಗೆ ಇರುವುದು. ವಿಭಿನ್ನ ಸಂದರ್ಭಗಳನ್ನು ಹೇಗೆ ನಿಭಾಯಿಸುವುದು ಮತ್ತು ಒಬ್ಬ ಬ್ಯಾಟ್ಸ್ ಮ್ಯಾನ್ ಅನ್ನು ಔಟ್ ಮಾಡಲು ಹೇಗೆ ಯೋಜನೆ ರೂಪಿಸುವುದು ಎಂಬುದನ್ನು ನಾನು ಅವರ ಬಳಿ ಕಲಿತಿದ್ದೇನೆ ಎಂದು ಹೇಳಿದ್ದಾರೆ.

Jasprit Bumrah 1

ಬೆನ್ನು ನೋವಿನ ಗಾಯದ ಸಮಸ್ಯೆಯಿಂದ ಕಳೆದ ಐದು ತಿಂಗಳಿಂದ ಭಾರತದ ತಂಡದಿಂದ ಹೊರಬಿದ್ದಿದ್ದ ಬುಮ್ರಾ ಅವರು ಜನವರಿ 5 ರಿಂದ ಆರಂಭವಾಗುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಗೆ ಭಾರತ ತಂಡವನ್ನು ಸೇರಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *