– ಮನನೊಂದ ಯುವಕ ಆತ್ಮಹತ್ಯೆಗೆ ಶರಣು
ಚಿತ್ರದುರ್ಗ: ಅಪ್ರಾಪ್ತ ಮಗಳ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದ ಯುವಕನಿಗೆ ಪೋಷಕರು ಬೆದರಿಕೆ ಹಾಕಿ, ಮದುವೆಯಾಗುವಂತೆ ಹೇಳಿದ್ದಾರೆ. ಇದರಿಂದ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗ ತಾಲೂಕಿನ ಆಯಿತೋಳು ಗ್ರಾಮದಲ್ಲಿ ನಡೆದಿದೆ.
ಆಯಿತೋಳು ಗ್ರಾಮದ ಪ್ರಹ್ಲಾದಪ್ಪ ಅವರ ಮಗ ಅಭಿಷೇಕ್ ಆತ್ಮಹತ್ಯೆಗೆ ಶರಣಾದ ಯುವಕ. ಅಭಿಷೇಕ್ ತನ್ನ ಸ್ನೇಹಿತರೊಂದಿಗೆ ಡಿಸೆಂಬರ್ 27ರಂದು ಗಂಜಿಗಟ್ಟೆ ಬೆಟ್ಟದಲ್ಲಿರುವ ಶ್ರೀರಂಗನಾಥಸ್ವಾಮಿ ದೇಗುಲದ ಬಳಿ ಬಾಲ್ಯದ ಗೆಳತಿಯ ಹುಟ್ಟುಹಬ್ಬದ ಪಾರ್ಟಿಗೆ ತೆರಳಿದ್ದ. ಆಗ ಇಲ್ಲ ಸಲ್ಲದ ಅನುಮಾನದಿಂದ ದಿಢೀರ್ ಸ್ಥಳಕ್ಕೆ ಧಾವಿಸಿದ ಅಪ್ರಾಪ್ತ ಬಾಲಕಿಯ ತಂದೆ ಹಾಗೂ ಮಾವ ಸೇರಿ ಅಭಿಷೇಕ್‍ಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಅಭಿಷೇಕ್‍ನ ಸ್ನೇಹಿತ ಆಟೋ ಚಾಲಕ ಶ್ರೀಧರ್ ಹಾಗೂ ತಂದೆ ಪ್ರಹ್ಲಾದಪ್ಪ ಅವರನ್ನು ಎಳೆದು ತಂದು ಮೂರು ದಿನಗಳ ಕಾಲ ಮನೆಯೊಂದರಲ್ಲಿ ಆಟೋ ಸಹಿತ ಕೂಡಿ ಹಾಕಿದ್ದರು.
ನೀವು ಪದೇ ಪದೇ ನಮ್ಮ ಮಗಳನ್ನು ಆಟೋ, ಬೈಕ್‍ಲ್ಲಿ ಕೂರಿಸಿಕೊಂಡು ಎಲ್ಲೋಲ್ಲೋ ಸುತ್ತಾಡಿದ್ದೀರ. ಈಗ ಅವಳನ್ನು ಯಾರು ಮದುವೆಯಾಗುತ್ತಾರೆ. ಹೀಗಾಗಿ ಅಭಿಷೇಕ್ ಜೊತೆಗೆ ಆಕೆಯ ಮದುವೆಯಾಗಬೇಕು ಎಂದು ಒತ್ತಾಯಿಸಿ, ಹಲ್ಲೆ ನಡೆಸಿದ್ದರು. ಜೊತೆಗೆ ಕೊಠಡಿಯೊಂದರಲ್ಲಿ ಬಂಧಿಸಿಟ್ಟಿದ್ದ ಮೂವರಿಗೂ ಮನಬಂದಂತೆ ಥಳಿಸಿ, ಕಿರುಕುಳ ನೀಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಅಪ್ರಾಪ್ತೆಯ ತಂದೆ ನೀಡಿದ ಕಿರುಕುಳ ತಡೆಯಲಾಗದೇ ಅಭಿಷೇಕ್ ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಮೂವರನ್ನು ಬಿಟ್ಟು ಕಳುಹಿಸಿದ್ದರು. ಆದರೆ ಇಷ್ಟಕ್ಕೆ ಸುಮ್ಮನಾಗದ ಬಾಲಕಿಯ ತಂದೆ ಹಾಗೂ ಸಂಬಂಧಿಕರು, ಅಭಿಷೇಕ್ ಮದುವೆಯಾಗದಿದ್ದರೆ ಜೀವಂತವಾಗಿ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿದ್ದರು. ಹೀಗಾಗಿ ಈ ಅವಮಾನ ಹಾಗೂ ಪ್ರಾಣ ಬೆದರಿಕೆಯನ್ನು ಸಹಿಸಲಾಗದ ಅಭಿಷೇಕ್ ಗ್ರಾಮದ ಹೊರವಲಯದಲ್ಲಿ ಡಿಸೆಂಬರ್ 30ರಂದು ನೇಣಿಗೆ ಶರಣಾಗಿದ್ದಾನೆ.
ಮೃತ ಅಭಿಷೇಕ್ ಸರ್ಕಾರಿ ಕಲಾ ಕಾಲೇಜಿನಲ್ಲಿ ಪ್ರಥಮ ಬಿಎ ಓದುತ್ತಿದ್ದು, ಬಾಲಕಿ ಸಹ ಅಪ್ರಾಪ್ತಳಾಗಿದ್ದಾಳೆ. ಹೀಗಾಗಿ ಮದುವೆ ಮಾಡಿಕೊಳ್ಳುವುದಕ್ಕೆ ಆಗಲ್ಲ ಎಂದಾಗ ಬಾಲಕಿಯ ಮಾವ ಹಾಗೂ ತಂದೆ ಇಲ್ಲ ಸಲ್ಲದ ಆರೋಪವನ್ನು ಅಭಿಷೇಕ್ ಮೇಲೆ ಹೋರಿಸಿದ್ದರು. ಪೊಲೀಸರಿಗೆ ದೂರು ನೀಡಿದರೆ, ತಾವೂ ದೂರು ನೀಡುವುದಾಗಿ ಬೆದರಿಸಿದ್ದರು. ಹೀಗಾಗಿ ಅವರ ಕಿರುಕುಳ ಸಹಿಸಲಾಗದೇ ಅಭಿಷೇಕ್ ಸಾವಿಗೀಡಾಗಿದ್ದಾನೆ ಎಂದು ಮೃತನ ಸಹೋದರ ಮಹೇಶ್ ಆರೋಪಿಸಿದ್ದಾರೆ.
ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಅಭಿಷೇಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.