ಚಾಮರಾಜನಗರ: ಜಮೀನಿನ ಬೆಳೆ ಮೇಲೆ ಟ್ರ್ಯಾಕ್ಟರ್ ಹರಿಸಿದ್ದಕ್ಕೆ ತಮ್ಮನೊಬ್ಬ ಅಣ್ಣನನ್ನೇ ಕೊಲೆ ಮಾಡಿದ ಘಟನೆ ಚಾಮರಾಜನಗರ ತಾಲೂಕಿ ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದೆ.
ಕೊತ್ತಲವಾಡಿ ಗ್ರಾಮದ ನಿವಾಸಿ ಪುಟ್ಟಸ್ವಾಮಪ್ಪ (65) ಕೊಲೆಯಾದ ಅಣ್ಣ. ಅದೇ ಗ್ರಾಮದ ಸೋಮಪ್ಪ ಕೊಲೆಗೈದ ತಮ್ಮ. ಸೋಮಪ್ಪ ಹಾಗೂ ಆತನ ದೊಡ್ಡಪ್ಪನ ಮಗ ಪುಟ್ಟಸ್ವಾಮಪ್ಪ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಆದರೆ ಮಂಗಳವಾರ ಪುಟ್ಟಸ್ವಾಮಪ್ಪ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಜಮೀನಿಗೆ ಹೋಗುತ್ತಿದ್ದ. ಈ ವೇಳೆ ತಮ್ಮನ ಜಮೀನಿನ ಬೆಳೆಯ ಮೇಲೆ ಟ್ರ್ಯಾಕ್ಟರ್ ಹರಿಸಿದ್ದಾನೆ. ಇದರಿಂದ ಕೋಪಗೊಂಡ ಸೋಮಪ್ಪ ಅಣ್ಣನ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ.
ಸೋಮಪ್ಪ ಹಾಗೂ ಪುಟ್ಟಸ್ವಾಮಪ್ಪ ಮಧ್ಯೆ ಮಾತಿಗೆ ಮಾತು ಬೆಳೆದು, ಪರಿಸ್ಥಿತಿ ವಿಕೋಪಕ್ಕೆ ತಲಿಪಿದೆ. ಈ ವೇಳೆ ಸೋಮಪ್ಪ ಕಲ್ಲಿನಿಂದ ಪುಟ್ಟಸ್ವಾಮಪ್ಪಗೆ ಹೊಡೆದಿದ್ದಾನೆ. ಕಲ್ಲಿನಿಂದ ಪೆಟ್ಟು ತಿಂದ ಪುಟ್ಟಸ್ವಾಮಪ್ಪ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ಪುಟ್ಟಸ್ವಾಮಪ್ಪನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಗೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಆರೋಪಿ ಸೋಮಪ್ಪನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಕೊಲೆ ನಡೆದಿದೆ ಎನ್ನುವುದು ಪೋಲಿಸರ ಪ್ರಾಥಮಿಕ ಹಂತದ ಮಾಹಿತಿಯಾಗಿದೆ.
ಇಂತಹ ಸಣ್ಣಪುಟ್ಟ ವಿಚಾರಕ್ಕೆ ಜಗಳವಾಡಿಕೊಳ್ಳದಂತೆ ಚಾಮರಾಜನಗರ ಎಸ್‍ಪಿ ಆನಂದ್ ಕುಮಾರ್ ಅವರು ಜನರಿಗೆ ತಿಳಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಪ್ರಕರಣದ ಸಂಬಂಧ ಸೋಮಪ್ಪನನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.