ಮಾದಾರ ಚೆನ್ನಯ್ಯ ಸ್ವಾಮೀಜಿ ರಾಜಕೀಯ ಪ್ರವೇಶಕ್ಕೆ ಬೆಂಬಲಿಸಿದ್ದ ಪೇಜಾವರ ಶ್ರೀಗಳು

Public TV
2 Min Read
Basava Murthy Madara Chennaiah Swamiji

– ಕಣ್ಣೀರಿಟ್ಟ ಮಾದಾರ ಚೆನ್ನಯ್ಯ ಸ್ವಾಮೀಜಿ

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಮಠಗಳ ನೆಲೆವೀಡು. ಇದು ವಿವಿಧ ಸಮುದಾಯಗಳ ಗುರು ಪೀಠಗಳಿರುವ ತವರೂರು. ಇಲ್ಲಿ ಪ್ರಭಾವಿ ಮಠವೆನಿಸಿರೋ ಶ್ರೀ ಮಾದಾರ ಚೆನ್ನಯ್ಯ ಗುರು ಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳೊಂದಿಗೆ ಉಡುಪಿಯ ಕೃಷ್ಣ ಮಠದ ಪೇಜಾವರ ಶ್ರೀಗಳು ಅವಿನಾಭಾವ ಸಂಬಂಧ ಹೊಂದಿದ್ದರು. ಹೀಗಾಗಿ ಇಂದು ಅವರ ಅಗಲಿಕೆಯಿಂದಾಗಿ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ವೈಯುಕ್ತಿಕವಾಗಿ ಪೇಜಾವರ ಶ್ರೀಗಳು ತಮ್ಮ ಏಳಿಗೆಗಾಗಿ ಬೆಂಬಲಿಸಿದ ಕ್ಷಣ ನೆನೆದು ಮಾದಾರ ಚೆನ್ನಯ್ಯ ಸ್ವಾಮೀಜಿ ಕಣ್ಣೀರಿಟ್ಟಿದ್ದಾರೆ.

ಸಮಾಜದಲ್ಲಿರುವ ಮೇಲು ಕೀಳು ಸರಿಪಡಿಸುವ ಬಗ್ಗೆ ಮೊದಲ ಬಾರಿಗೆ 2008ರಲ್ಲಿ ದೊಡ್ಡಮಟ್ಟದಲ್ಲಿ ದನಿ ಎತ್ತಿದ್ದ ಶ್ರೀಗಳು, ಸಮಾನತೆಯ ಚಳುವಳಿಗೂ ತಮ್ಮನ್ನು ಸಾಕ್ಷೀಕರಿಸಿದ್ದರು. ಅಲ್ಲದೇ ಮೈಸೂರಿನ ಸಾಮರಸ್ಯ ಯಾತ್ರೆಯಿಂದಾಗಿ ಪೇಜಾವರಶ್ರೀಗಳ ಜೊತೆ ನಮಗೆ ಬಾಂಧವ್ಯ ಮೂಡಿದ್ದೂ, ದಲಿತರನ್ನು ಅಪ್ಪಿಕೊಳ್ಳುವ ಚಳುವಳಿಗೆ ಟೀಕೆ ಎದುರಿಸಿದರೂ ಸಹ ಅವರು ಎದೆಗುಂದಲಿಲ್ಲ. ದಲಿತರನ್ನು ಓಲೈಸುವ ನಾಟಕೀಯ ಬೆಳವಣಿಗೆ ಎಂದು ವಿಚಾರವಾದಿಗಳಿಂದ ಆರೋಪ ಕೇಳಿಬಂದರು ಸಹ ಅವರ ನಡೆ ಕೈಬಿಡಲಿಲ್ಲ ಎಂದು ದಲಿತರೊಂದಿಗೆ ಸ್ವಾಮೀಜಿ ನಡೆದು ಬಂದ ದಾರಿಯನ್ನು ಮಾದಾರ ಚೆನ್ನಯ್ಯ ಸ್ವಾಮೀಜಿ ನೆನೆದರು.

Basava Murthy Madara Chennaiah Swamiji a

ಪೇಜಾವರ ಶ್ರೀಗಳಿಗೆ ಪುತ್ರನಂತೆ: ಪೇಜಾವರ ಸ್ವಾಮೀಜಿ ನಮ್ಮಿಂದ ಬೌದ್ಧಿಕವಾಗಿ ದೂರಾಗಿರಬಹುದು ಆದರೆ ಅವರ ತತ್ವ ಆದರ್ಶ ನಮ್ಮ ಜತೆ ಇರುತ್ತವೆ. ನಾನು ಪೇಜಾವರ ವಿಶ್ವೇಶತೀರ್ಥ ಶ್ರೀಪಾದಂಗಳ ಪಾಲಿಗೆ ನಾನು ಪುತ್ರನಂತೆ ಕಾಣುತ್ತಿದ್ದೆ. ಪೇಜಾವರ ಶ್ರೀಗಳೊಂದಿಗೆ ನಮ್ಮ ಒಡನಾಟ ಕೇವಲ ಹತ್ತು ವರ್ಷದದಲ್ಲೇ ಅತಿ ಸಾಮಿಪ್ಯವಾಗಿಸಿತ್ತು. ಉಡುಪಿ ಮಠದ ಭಕ್ತರಂತೆ ನಾನು ಸಹ ನಷ್ಟ ಅನುಭವಿಸುತ್ತಿದ್ದೇನೆ ಎಂದರು.

ಪೇಜಾವರ ಶ್ರೀಗಳು ನಿಸ್ವಾರ್ಥ ಭಾವದವರಾಗಿದ್ದೂ, ಸದಾ ಎಲ್ಲರಿಗೂ ಒಳಿತನ್ನೇ ಮಾಡುವ ಭಾವದವರಾಗಿದ್ದರು. ಹಾಗೆಯೇ ವೈಯಕ್ತಿಕವಾಗಿ ನನ್ನ ಏಳ್ಗೆಯನ್ನು ಸಹ ಪೇಜಾವರ ಶ್ರೀಗಳು ಬಯಸುತ್ತಿದ್ದರು. ಈ ಹಿಂದೆ ಮಾದರ ಚೆನ್ನಯ್ಯ ಸ್ವಾಮೀಜಿ ರಾಜಕೀಯ ಪ್ರವೇಶದ ಮಾಡುತ್ತಾರೆಂಬ ಸುಳ್ಳು ವದಂತಿ ಹರಡಿದ್ದಾಗ ನನ್ನೊಂದಿಗೆ ಮಾತನಾಡಿದ್ದರು. ಅಲ್ಲದೇ ಒಂದು ವೇಳೆ ನೀನು ರಾಜಕೀಯ ಪ್ರವೇಶಿಸುವ ಆಕಾಂಕ್ಷೆ ಇದ್ದರೆ ತಿಳಿಸು, ನಾನೇ ಮೇಲ್ಮಟ್ಟದಲ್ಲಿ ಮಾತಾನಾಡುತ್ತೇನೆ ಎಂದಿದ್ದರು. ಆಗ ನಾನು ರಾಜಕೀಯ ಪ್ರವೇಶದ ಬಗ್ಗೆ ನಿರಾಕರಿಸಿದಾಗ ಧಾರ್ಮಿಕವಾಗಿ ಮಠವನ್ನು ಮುನ್ನಡೆಸಲು ಸೂಚಿಸಿದ್ದರು. ಅಧಿಕೃತವಾಗಿ ಚಿತ್ರದುರ್ಗದಲ್ಲಿರುವ ನಮ್ಮ ಮಠಕ್ಕೆ ಭೇಟಿ ನೀಡುವ ಆಶಯ ವ್ಯಕ್ತಪಡಿಸಿದ್ದರು. ಆದರೆ ಅವರ ಕೊನೆ ಆಸೆ ಹಾಗೆಯೇ ಉಳಿಯಿತು ಎಂದು ಮಾದಾರ ಚೆನ್ನಯ್ಯ ಸ್ವಾಮೀಜಿ ಕಂಬನಿ ಮಿಡಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *