ಆರ್ಥಿಕತೆ ಸರಿ ದಾರಿಗೆ ತರದಿದ್ದಲ್ಲಿ ಬಿಜೆಪಿ ಮುಕ್ತ ಭಾರತವಾಗುವ ಕಾಲ ಸನ್ನಿಹಿತ – ಸುಬ್ರಮಣಿಯನ್ ಸ್ವಾಮಿ

Public TV
2 Min Read
subramanian swamy 3

ನವದೆಹಲಿ: ಆರ್ಥಿಕತೆಯನ್ನು ಸರಿ ದಾರಿಗೆ ತರದಿದ್ದಲ್ಲಿ ಬಿಜೆಪಿ ಮುಕ್ತ ಭಾರತವಾಗುವುದರಲ್ಲಿ ಸಂಶಯವಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, ಭಾರತದ ಆರ್ಥಿಕತೆ ಭೀಕರ ಸ್ಥಿತಿಯಲ್ಲಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ಮುಕ್ತ ಭಾರತವಾಗುವುದು ವಾಸ್ತವವಾಗಬಹುದು. ಪ್ರಧಾನಿ ನರೇಂದ್ರ ಮೋದಿಯವರ ಸಲಹೆಗಾರರನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಆರ್ಥಿಕತೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕತ್ತಲ ಕೋಣೆಯಲ್ಲಿಡಲಾಗಿದೆ ಎಂದು ಕಿಡಿಕಾರಿದ್ದಾರೆ.

ಇದೇ ಪರಿಸ್ಥಿತಿ ಮುಂದುವರಿದರೆ ಬಿಜೆಪಿ ಮುಕ್ತ ಭಾರತ ವಾಸ್ತವವಾಗುವ ಕಾಲ ಸನ್ನಿಹಿತವಾಗಲಿದೆ. ಆರ್ಥಿಕತೆಯನ್ನು ಶೀಘ್ರದಲ್ಲೇ ಸರಿ ದಾರಿಗೆ ತರಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿಯವರ ಸಲಹೆಗಾರರು ಯಾರೆಂದು ನನಗೆ ತಿಳಿದಿಲ್ಲ. ಆದರೆ ಅವರು ಆರ್ಥಿಕತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸತ್ಯ ಹೇಳುತ್ತಿಲ್ಲ ಎಂದು ತಿಳಿಸಿದ್ದಾರೆ.

PM Narendra Modi speaks at16th ASEAN India Summit

ಜಾರ್ಖಂಡ್ ವಿಧಾನಸಭೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸುಬ್ರಮಣಿಯನ್ ಸ್ವಾಮಿ ಅವರು ಈ ಕುರಿತು ಹೇಳಿಕೆ ನೀಡಿದ್ದು, ಮಹತ್ವ ಪಡೆದುಕೊಂಡಿದೆ.

ಸಿಎಎ ವಿರುದ್ಧ ಪ್ರತಿಭಟಿಸುತ್ತಿರುವ ಕಾಂಗ್ರೆಸ್ ವಿರುದ್ಧ ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ ನಡೆಸಿದ್ದು, ಸಿಎಎ ಹಾಗೂ ಎನ್‍ಆರ್‍ಸಿಯನ್ನು ಕಾಂಗ್ರೆಸ್ ಮೊದಲು ಪರಿಚಯಿಸಿತ್ತು. ಕೇಂದ್ರ ಸರ್ಕಾರ ಈ ಕುರಿತು ಕಾನೂನು ರೂಪಿಸಿದರೆ ಎಲ್ಲ ರಾಜ್ಯಗಳು ಅದನ್ನು ಜಾರಿಗೆ ತರಬೇಕು. ಸಿಎಎ ಹಾಗೂ ಎನ್‍ಆರ್‍ಸಿ ಬಗ್ಗೆ ಕಾಂಗ್ರೆಸ್ ಹಿಂದಿನಿಂದಲೂ ಮಾತನಾಡುತ್ತಿದೆ. ಈ ಕುರಿತು ಸ್ವತಃ ಮನಮೋಹನ್ ಸಿಂಗ್ ಅವರೇ ಸದನದಲ್ಲಿ ಹೇಳಿದ್ದಾರೆ. ಆದರೆ ಇದೀಗ ಅದರ ವಿರುದ್ಧವೇ ಹೋರಾಡುತ್ತಿದ್ದಾರೆ ಎಂದು ಸ್ವಾಮಿ ಟೀಕಿಸಿದರು.

ಸೋಮವಾರವಷ್ಟೇ ಜಾರ್ಖಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಮಹಾರಾಷ್ಟ್ರ ಬಳಿಕ ಆಡಳಿತ ನಡೆಸುತ್ತಿದ್ದ ಬಿಜೆಪಿಗೆ ಜಾರ್ಖಂಡ್‍ನಲ್ಲೂ ಮುಖಭಂಗವಾಗಿದೆ. 47 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಏರಲಿದೆ.

economic growth india

ಮಹಾರಾಷ್ಟ್ರದಲ್ಲಿ ಹಲವು ರಾಜಕೀಯ ಬೆಳವಣಿಗೆಗಳ ನಡುವೆಯೂ ಅಧಿಕಾರ ಪಡೆಯಲು ವಿಫಲವಾದ ಬಿಜೆಪಿ, ಜಾರ್ಖಂಡ್‍ನಲ್ಲೂ ನಿರಾಸೆ ಅನುಭವಿಸಿದೆ. ಜೆಎಂಎಂ (ಜಾರ್ಖಂಡ್ ಮುಕ್ತಿ ಮೋರ್ಚಾ) 31, ಕಾಂಗ್ರೆಸ್ 15, ಆರ್ ಜೆಡಿ 1 ಮೈತ್ರಿಕೂಟ 47 ಸ್ಥಾನಗಳನ್ನು ಪಡೆದು ಭಾರೀ ವಿಜಯವನ್ನು ಸಾಧಿಸಿದೆ. ಇತ್ತ ಬಿಜೆಪಿ 25 ಸ್ಥಾನ ಪಡೆದು 2ನೇ ಸ್ಥಾನದಲ್ಲಿದ್ದರೆ, ಜೆವಿಎಂ (ಜಾರ್ಖಂಡ್ ವಿಕಾಸ್ ಮೋರ್ಚಾ) 3, ಇತರರು 6 ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಒಟ್ಟು 81 ಸ್ಥಾನಗಳಿರುವ ಜಾರ್ಖಂಡ್ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಬೇಕಾದ 41 ಸ್ಥಾನಗಳು ಕಾಂಗ್ರೆಸ್ ಮೈತ್ರಿಕೂಟಕ್ಕೆ ಲಭಿಸಿದೆ. ಹೀಗಾಗಿ ಕಾಂಗ್ರೆಸ್‍ನ ಮೈತ್ರಿ ಸರ್ಕಾರ ರಚನೆಯಾಗುಲಿದೆ.

Share This Article
Leave a Comment

Leave a Reply

Your email address will not be published. Required fields are marked *